ಸ್ವಿಟ್ಜರ್ಲೆಂಡ್: ಹೊಸ ವರ್ಷದ ಸಂಭ್ರಮದ ವೇಳೆ ನಡೆದ ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸ್ವಿಟ್ಜರ್ಲೆಂಡ್‌ನ ಕ್ರಾನ್ಸ್-ಮಂಟಾನಾದಲ್ಲಿ ಗುರುವಾರ ಸಂಜೆ ನೀರವ ಮೌನ ಆವರಿಸಿತ್ತು. ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನೂರಾರು ಜನರು ಒಂದೆಡೆ ಸೇರಿ, ಅಗಲಿದ ಜೀವಗಳಿಗೆ ಹೂಗುಚ್ಛಗಳನ್ನಿಟ್ಟು, ಮೇಣದಬತ್ತಿ ಬೆಳಗಿ ಕಣ್ಣೀರು ಹಾಕಿದರು.
ಹೊಸ ವರ್ಷಾಚರಣೆಯ ವೇಳೆ ‘ಲಾ ಕಾನ್ಸ್ಟೆಲ್ಲೇಷನ್’ (Le Constellation) ಬಾರ್‌ನಲ್ಲಿ ತಡರಾತ್ರಿ 1:30ರ ಸುಮಾರಿಗೆ ಸಂಭವಿಸಿದ ಈ ಭಾರಿ ಅಗ್ನಿ ಅವಘಡದಲ್ಲಿ ಸುಮಾರು 40 ಜನರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳವನ್ನು ನೋಡುತ್ತಾ ನಿಂತಿದ್ದ ಜನರು ಆಘಾತದಿಂದ ಮಾತು ಬಾರದೆ ಮೌನಕ್ಕೆ ಶರಣಾಗಿದ್ದರು.
ಶ್ರದ್ಧಾಂಜಲಿ ಸಲ್ಲಿಸಲು ಬಂದಿದ್ದ ಒರೊಸ್ಟೆವಿಕ್ ಎಂಬುವರು ಮಾತನಾಡಿ, “ನಾನು ಆ ಸಮಯದಲ್ಲಿ ಬಾರ್‌ನಲ್ಲಿ ಇರಲಿಲ್ಲ. ಆದರೆ ನನ್ನ ಪೋಷಕರ ಸ್ನೇಹಿತರು ಹಾಗೂ ನನಗೆ ಪರಿಚಯವಿದ್ದ ಸುಮಾರು 10 ಮಂದಿ ಸಂಬಂಧಿಕರು ಮತ್ತು ಸ್ನೇಹಿತರು ಈ ದುರಂತಕ್ಕೆ ಬಲಿಯಾಗಿದ್ದಾರೆ. ಕೆಲವರು ಆಸ್ಪತ್ರೆಯಲ್ಲಿದ್ದಾರೆ” ಎಂದು ಕಣ್ಣೀರು ಹಾಕಿದರು.
ಮತ್ತೊಬ್ಬ ಪ್ರತ್ಯಕ್ಷದರ್ಶಿ ಮ್ಯಾಥಿಸ್ ಎಎಫ್‌ಪಿ (AFP) ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, “ನಾವು ಪ್ರತಿ ವಾರಾಂತ್ಯದಲ್ಲಿ ಇದೇ ಬಾರ್‌ನಲ್ಲಿ ಸೇರುತ್ತಿದ್ದೆವು. ಆದರೆ ಅಂದು ಹೋಗಿರಲಿಲ್ಲ. ಇದೊಂದು ಸಣ್ಣ ಬೆಂಕಿ ಎಂದು ನಾವು ಭಾವಿಸಿದ್ದೆವು. ಆದರೆ ಅಲ್ಲಿಗೆ ಹೋದಾಗ ಕಂಡಿದ್ದು ಯುದ್ಧಭೂಮಿಯಂತಹ ದೃಶ್ಯ. ಅದನ್ನು ‘ಪ್ರಳಯ’ (Apocalypse) ಎನ್ನಲಷ್ಟೇ ಸಾಧ್ಯ. ಅಷ್ಟು ಭಯಾನಕವಾಗಿತ್ತು ಆ ದೃಶ್ಯ” ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಿವಾಸಿ ಪಾಲೊ ಮಾರ್ಟಿನ್ಸ್, “ನನ್ನ ಮಗ ಕೂಡ ತನ್ನ ಗೆಳತಿಯೊಂದಿಗೆ ಅದೇ ಬಾರಿಗೆ ಹೋಗಬೇಕಿತ್ತು. ಅವರು ಹತ್ತಿರದಲ್ಲೇ ಇದ್ದರು, ಆದರೆ ಅದೃಷ್ಟವಶಾತ್ ಒಳಗೆ ಹೋಗಲಿಲ್ಲ. ಮನೆಗೆ ಬಂದಾಗ ಮಗ ತೀವ್ರ ಆಘಾತಕ್ಕೊಳಗಾಗಿದ್ದ. ಆದರೆ ಅವನ 17 ವರ್ಷದ ಸ್ನೇಹಿತನ ದೇಹ ಶೇ. 30ರಷ್ಟು ಸುಟ್ಟುಹೋಗಿದ್ದು, ಚಿಕಿತ್ಸೆಗಾಗಿ ಜರ್ಮನಿಗೆ ಕಳುಹಿಸಲಾಗಿದೆ” ಎಂದು ದುರಂತದ ತೀವ್ರತೆಯನ್ನು ವಿವರಿಸಿದರು.
ಪೊಲೀಸರು ಬ್ಯಾರಿಕೇಡ್ ಹಾಕಿ ರಕ್ಷಣೆ ಒದಗಿಸಿದ್ದು, ಬಾರ್‌ಗೆ ಹೋಗುವ ರಸ್ತೆಯ ಪ್ರವೇಶ ದ್ವಾರದಲ್ಲಿ ಇರಿಸಲಾದ ಟೇಬಲ್ ಮೇಲೆ ಜನರು ಸಾಲಾಗಿ ಬಂದು ಹೂವು ಮತ್ತು ಮೇಣದಬತ್ತಿಗಳನ್ನು ಇಡುತ್ತಿದ್ದಾರೆ. ಇನ್ನು ಕೆಲವರು ತಮ್ಮ ಆಪ್ತರು ನಾಪತ್ತೆಯಾಗಿದ್ದು, ಅವರ ಬಗ್ಗೆ ಯಾವುದೇ ಮಾಹಿತಿ ಸಿಗದೆ ಪರದಾಡುತ್ತಿದ್ದಾರೆ.






