ಬಳ್ಳಾರಿ : ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಮತ್ತು ಗುಂಡಿನ ಚಕಮಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ನೀಡಿದ ದೂರಿನ ಮೇರೆಗೆ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ (Nara Bharath Reddy) ಸೇರಿದಂತೆ ಹಲವರ ವಿರುದ್ಧ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಜನಾರ್ದನ ರೆಡ್ಡಿ ಮತ್ತು ಅವರ ಆಪ್ತ ನಾಗರಾಜ್ ನೀಡಿದ ದೂರಿನನ್ವಯ ಒಟ್ಟು 23 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಚಾನಾಳ್ ಶೇಖರ್, ಅಹಂಬಾವಿ ಲೋಕೇಶ್, ಸತೀಶ್ ರೆಡ್ಡಿ, ಶಾಸಕ ನಾರಾ ಭರತ್ ರೆಡ್ಡಿಇದಲ್ಲದೆ ನಾರಾ ಪ್ರತಾಪ್ ರೆಡ್ಡಿ ಮತ್ತು ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ.
ದೂರಿನಲ್ಲಿ ಜನಾರ್ದನ ರೆಡ್ಡಿ ಅವರ ಮನೆಗೆ ನುಗ್ಗಿ ಬೆದರಿಕೆ ಹಾಕಲಾಗಿದೆ ಮತ್ತು ಫೈರಿಂಗ್ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತ ನಾಗರಾಜ್ ಅವರು ಬ್ಯಾನರ್ ಹಾಕದಂತೆ ಮನವಿ ಮಾಡಿದಾಗ, ಶಾಸಕರ ಸೂಚನೆ ಮೇರೆಗೆ ಬಂದವರು ಜಾತಿ ನಿಂದನೆ ಮಾಡಿದ್ದಾರೆ. ಹಾಗೂ ರೆಡ್ಡಿ ಒಡೆತನದ ಖಾಸಗಿ ಜಾಗಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ, “ಹೊಡಿರಿ ಬಡಿಯಿರಿ” ಎಂದು ಘೋಷಣೆ ಕೂಗಿ ಗಲಾಟೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ಅವರ ಸಮ್ಮುಖದಲ್ಲಿ ಜನಾರ್ದನ ರೆಡ್ಡಿ ಅವರು ದೂರು ನೀಡಿದ್ದರು. ಪ್ರಕರಣದ ಗಂಭೀರತೆ ಅರಿತು ಎಎಸ್‌ಪಿ (ASP) ರವಿಕುಮಾರ್ ಹಾಗೂ ಬ್ರೂಸ್‌ಪೇಟೆ ಪೊಲೀಸರು ರೆಡ್ಡಿ ಅವರ ಮನೆಗೆ ತೆರಳಿ ದೂರು ಸ್ವೀಕರಿಸಿದ್ದರು. ಸದ್ಯ ಪೊಲೀಸರು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.






