ತುಮಕೂರು: ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಎಸ್ ಪಿ ಪವನ್ ನೆಜ್ಜೂರ್ ಅವರು ತುಮಕೂರಿನಲ್ಲಿ ಆತ್ಮಹತ್ಯೆಗೆ (Suicide) ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.
ತುಮಕೂರಿನ ಸ್ನೇಹಿತರೊಬ್ಬರ ಫಾರ್ಮ್ ಹೌಸ್‌ನಲ್ಲಿ ಪವನ್ ನೆಜ್ಜೂರ್ ಅವರು ANXIT 0.5 ಎಂಬ ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಅವರನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೂ ಮುನ್ನ ಪವನ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅವರ ಕೊನೆಯ ಲೊಕೇಶನ್ ತುಮಕೂರು ಜಿಲ್ಲೆಯ ಶಿರಾದಲ್ಲಿ ಪತ್ತೆಯಾಗಿತ್ತು. ಬಳ್ಳಾರಿ ಶೂಟೌಟ್ ಪ್ರಕರಣವನ್ನು ಸರಿಯಾಗಿ ನಿಭಾಯಿಸಿಲ್ಲ ಮತ್ತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿಲ್ಲ ಎಂಬ ಕಾರಣಕ್ಕೆ ಸರ್ಕಾರ ಅವರನ್ನು ನಿನ್ನೆಯಷ್ಟೇ ಅಮಾನತುಗೊಳಿಸಿತ್ತು. ಈ ಕಾರಣದಿಂದ ಮನನೊಂದು ಆತ್ಯಹತ್ಯೆಗೆ ಯತ್ನಿಸಿರಬಹುದು.
ಆದರೆ ಗೃಹ ಇಲಾಖೆಯು ಇದೆಲ್ಲವೂ ಕೇವಲ ವದಂತಿ ಎಂದು ಆರಂಭದಲ್ಲಿ ಹೇಳಿದ್ದರೂ, ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಖಚಿತ ಮಾಹಿತಿ ಹೊರಬರುತ್ತಿದೆ.






