ನೆಲಮಂಗಲ: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದ್ದಾರೆ. ಕರ್ನಾಟಕದ ದೀರ್ಘಾವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿದ್ದ ದಿವಂಗತ ಡಿ. ದೇವರಾಜ ಅರಸು ಅವರ ದಾಖಲೆಯನ್ನು ಇದೇ ಜನವರಿ ತಿಂಗಳಲ್ಲಿ ಸಿದ್ದರಾಮಯ್ಯ ಅವರು ಮುರಿಯಲಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸಲು ‘ಯುವ ಅಹಿಂದ ಒಕ್ಕೂಟ’ವು ಭರ್ಜರಿ ಸಿದ್ಧತೆ ನಡೆಸಿದ್ದು, ಸಿದ್ದರಾಮಯ್ಯನವರಿಗೆ ಅಚ್ಚುಮೆಚ್ಚಿನ ನಾಟಿ ಕೋಳಿ ಊಟದ ವ್ಯವಸ್ಥೆ ಮಾಡಿದೆ.
ಈ ಸಂಭ್ರಮಾಚರಣೆಯ ಭಾಗವಾಗಿ ಜನವರಿ 6ರಂದು ನೆಲಮಂಗಲ ಟೌನ್‌ನ ಭಕ್ತನಪಾಳ್ಯದಲ್ಲಿ ಬೃಹತ್ ನಾಟಿ ಕೋಳಿ ಔತಣಕೂಟವನ್ನು ಆಯೋಜಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ನಾಟಿ ಕೋಳಿ ಸಾರು ಮತ್ತು ಮುದ್ದೆ ಎಂದರೆ ಎಲ್ಲಿಲ್ಲದ ಪ್ರೀತಿ. ಇದನ್ನೇ ಗಮನದಲ್ಲಿಟ್ಟುಕೊಂಡು, ಒಕ್ಕೂಟವು ತರಹೇವಾರಿ ನಾಟಿ ಕೋಳಿ ಖಾದ್ಯಗಳನ್ನು ಸಿದ್ಧಪಡಿಸುತ್ತಿದೆ. ಬರೋಬ್ಬರಿ 10 ಸಾವಿರ ಜನರಿಗೆ ಸಾಕಾಗುವಷ್ಟು ಭರ್ಜರಿ ಬಾಡೂಟವನ್ನು ಸಿದ್ದರಾಮಯ್ಯ ಅವರ ಅಭಿಮಾನಿಗಳಿಗೆ ಮತ್ತು ಕಾರ್ಯಕರ್ತರಿಗೆ ಉಣಬಡಿಸಲು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಈಗಾಗಲೇ ಯುವ ಅಹಿಂದ ಒಕ್ಕೂಟದ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿಯಾಗಿ ಔತಣಕೂಟಕ್ಕೆ ಆಹ್ವಾನ ನೀಡಿದ್ದಾರೆ. ಕೇವಲ ಸಿಎಂ ಮಾತ್ರವಲ್ಲದೆ, ಸಚಿವರಾದ ಸತೀಶ್ ಜಾರಕಿಹೊಳಿ, ಆರ್.ಬಿ. ತಿಮ್ಮಾಪುರ್ ಹಾಗೂ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ಅಹಿಂದ ನಾಯಕರಿಗೂ ಆಹ್ವಾನ ನೀಡಲಾಗಿದೆ. ಅರಸು ಅವರ ದಾಖಲೆ ಮುರಿಯುತ್ತಿರುವ ಸಿದ್ದರಾಮಯ್ಯ ಅವರ ಸಾಧನೆಯನ್ನು ಗರಿಗರಿ ಮುದ್ದೆ ಮತ್ತು ನಾಟಿ ಕೋಳಿ ಸಾರಿನೊಂದಿಗೆ ಆಚರಿಸಲು ಅಭಿಮಾನಿಗಳು ಕಾತುರರಾಗಿದ್ದಾರೆ.






