ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ವಿಚಾರ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಆದರೆ ಇಂದು ನಡೆದ ಮುಖ್ಯಮಂತ್ರಿಗಳ ಸುದ್ದಿಗೋಷ್ಠಿಯಲ್ಲಿ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮದವರ ಕಾಲೆಳೆದು, ನಗೆಗಡಲಲ್ಲಿ ತೇಲಿಸಿದ ಪ್ರಸಂಗ ನಡೆಯಿತು.
ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಗೆ ಆಗಮಿಸುವ ಮುನ್ನವೇ ಡಿಕೆಶಿ ಹಾಜರಿದ್ದರು. ಸಿಎಂ ಕುಳಿತುಕೊಳ್ಳುವ ಕುರ್ಚಿಯ ಪಕ್ಕದಲ್ಲೇ ಡಿಕೆಶಿ ಆಸೀನರಾಗಿದ್ದರು. ಫೋಟೋ ಫ್ರೇಮ್ ಸರಿಯಾಗಿ ಸಿಗಲಿ ಎಂಬ ಕಾರಣಕ್ಕೆ ಮಾಧ್ಯಮದವರು ಡಿಕೆಶಿಯವರನ್ನು ಇನ್ನೂ ಸ್ವಲ್ಪ ಪಕ್ಕಕ್ಕೆ (ಸಿಎಂ ಕುರ್ಚಿಯ ಹತ್ತಿರ) ಸರಿದು ಕುಳಿತುಕೊಳ್ಳುವಂತೆ ಮನವಿ ಮಾಡಿದರು. ತಕ್ಷಣವೇ ಸಮಯಪ್ರಜ್ಞೆ ಮೆರೆದ ಡಿಕೆಶಿ, “ನಾನು ಆ ಕಡೆ ಕೂತ್ಕೊಂಡ್ರೆ, ಸಿಎಂ ಚೇರ್ ಮೇಲೆ ಕೂತ್ಕೊಂಡ ಅಂದ್ ಬಿಡ್ತೀರಾ ನೀವು. ಅದನ್ನೇ ದೊಡ್ಡ ಬ್ರೇಕಿಂಗ್ ನ್ಯೂಸ್ ಮಾಡಿಬಿಡ್ತೀರಾ ಆಮೇಲೆ” ಎಂದು ಜೋರಾಗಿ ನಗುತ್ತಲೇ ಮಾಧ್ಯಮದವರನ್ನು ಕಿಚಾಯಿಸಿದರು.
ಡಿಕೆಶಿ ಮಾತು ಕೇಳಿ ಅಲ್ಲಿದ್ದ ಸಚಿವರು, ಸಿಬ್ಬಂದಿ ಹಾಗೂ ಪತ್ರಕರ್ತರು ಜೋರಾಗಿ ನಗಲು ಶುರುಮಾಡಿದರು. ಇದೇ ವೇಳೆ ಡಿಕೆಶಿ ಆಪ್ತ ಸಿಬ್ಬಂದಿಯೊಬ್ಬರು, “ಇಲ್ಲ ಸರ್, ಸಿಎಂ ಕುರ್ಚಿ ನಿಮ್ಮ ಹಿಂದೆ ಇಟ್ಟಿದ್ದಾರೆ” ಎಂದು ಸ್ಪಷ್ಟನೆ ನೀಡಲು ಮುಂದಾದರು. ಆಗ ಆತನನ್ನು ತಡೆದ ಡಿಕೆಶಿ, “ಹೇ ಸುಮ್ನಿರಪ್ಪಾ.. ಈ ಮೀಡಿಯಾದವರು ಬಾಳ ಡೇಂಜರ್” ಎಂದು ಮತ್ತೊಂದು ಕಾಮಿಡಿ ಪಂಚ್ ನೀಡಿದರು. ಗಂಭೀರ ರಾಜಕೀಯದ ನಡುವೆ ಡಿಕೆಶಿಯವರ ಈ ಹಾಸ್ಯ ಪ್ರಸಂಗ ಕೆಲಕಾಲ ಅಲ್ಲಿ ಹಗುರಾದ ವಾತಾವರಣ ಸೃಷ್ಟಿಸಿತು.






