ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿರುವ ಟಿಬೆಟಿಯನ್ ಕಾಲೋನಿಗೆ ಎಐಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಭೇಟಿ ನೀಡಿದ್ದು, ಬೌದ್ಧ ಧರ್ಮಗುರು 14ನೇ ದಲೈಲಾಮಾ ಅವರ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದ್ದಾರೆ.
ಶಾಂತಿ ಮತ್ತು ಅಹಿಂಸೆಯ ಹರಿಕಾರರಾಗಿರುವ ದಲೈಲಾಮಾ ಅವರನ್ನು ಭೇಟಿಯಾದ ಕ್ಷಣ ಅತ್ಯಂತ ಭಾವನಾತ್ಮಕವಾಗಿತ್ತು. ಈ ವೇಳೆ ಅಂಜಲಿ ನಿಂಬಾಳ್ಕರ್ ಅವರು ತಮ್ಮ ಕ್ಷೇತ್ರದ ಜನರ ಏಳಿಗೆ, ಸಮೃದ್ಧಿ ಹಾಗೂ ಶಾಂತಿಗಾಗಿ ಧರ್ಮಗುರುಗಳ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಪುತ್ರಿ ಲಖಮ್ಮ ನಿಂಬಾಳ್ಕರ್ ಹಾಗೂ ಕುಟುಂಬದ ಇತರ ಸದಸ್ಯರು ಕೂಡ ಉಪಸ್ಥಿತರಿದ್ದು, ದಲೈಲಾಮಾ ಅವರ ಆಶೀರ್ವಾದ ಪಡೆದರು.
ಭೇಟಿಯ ಬಳಿಕ ತಮ್ಮ ಅನುಭವ ಹಂಚಿಕೊಂಡ ಅಂಜಲಿ ನಿಂಬಾಳ್ಕರ್, “ಟಿಬೆಟಿಯನ್ ಬೌದ್ಧ ಧರ್ಮದ ಪರಮೋಚ್ಛ ನಾಯಕರಾದ ದಲೈಲಾಮಾ ಅವರನ್ನು ಭೇಟಿಯಾಗಿದ್ದು ನನ್ನ ಪಾಲಿನ ಸೌಭಾಗ್ಯ. ಮುಂಡಗೋಡಿನ ಈ ಪವಿತ್ರ ಸ್ಥಳದಲ್ಲಿ ಕಳೆದ ಕ್ಷಣಗಳು ಮನಸ್ಸಿಗೆ ಆಳವಾದ ನೆಮ್ಮದಿ ಮತ್ತು ಪ್ರಶಾಂತತೆಯನ್ನು ನೀಡಿದೆ,” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಚೀನಾದ ಆಕ್ರಮಣದ ವಿರುದ್ಧ ಅಹಿಂಸಾತ್ಮಕ ಹೋರಾಟ ನಡೆಸಿ, 1989ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿರುವ ದಲೈಲಾಮಾ ಅವರು ಜಗತ್ತಿನ ಕರುಣೆ ಮತ್ತು ಶಾಂತಿಯ ಸಂಕೇತವಾಗಿದ್ದಾರೆ ಎಂದು ಅಂಜಲಿ ನಿಂಬಾಳ್ಕರ್ ಸ್ಮರಿಸಿದ್ದಾರೆ.






