ಪಣಜಿ: ಗೋವಾ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ರಾಜ್ಯಕ್ಕೆ ಮೂರನೇ ಜಿಲ್ಲೆಯನ್ನು ಘೋಷಿಸಿದ್ದು, ಅದಕ್ಕೆ ‘ಕುಶಾವತಿ’ (Kushawati) ಎಂದು ನಾಮಕರಣ ಮಾಡಿದ್ದಾರೆ. ಈ ನಿರ್ಧಾರದೊಂದಿಗೆ ಗೋವಾದಲ್ಲಿ ಇನ್ನು ಮುಂದೆ ಮೂರನೇ ಜಿಲ್ಲಾ ಪಂಚಾಯತ್ ಕೂಡ ಅಸ್ತಿತ್ವಕ್ಕೆ ಬರಲಿದ್ದು, ಅದಕ್ಕೆ ಪ್ರತ್ಯೇಕ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇಮಕವಾಗಲಿದೆ.
ನೂತನ ‘ಕುಶಾವತಿ’ ಜಿಲ್ಲೆಯು ಪ್ರಮುಖವಾಗಿ ಸಾಂಗ್ವೆಮ್ (Sanguem), ಕ್ಯೂಪೆಮ್ (Quepem), ಕಾಣಕೋಣ (Canacona) ಮತ್ತು ಧಾರಬಂದೋರಾ (Dharbandora) ಎಂಬ ನಾಲ್ಕು ತಾಲೂಕುಗಳನ್ನು ಒಳಗೊಂಡಿರಲಿದೆ. ಈ ನಾಲ್ಕೂ ತಾಲೂಕುಗಳ ಮೂಲಕ ಹರಿಯುವ ಹಾಗೂ ಅಲ್ಲಿನ ಜನರ ಜೀವನದಿಯಾಗಿರುವ ‘ಕುಶಾವತಿ’ ನದಿಯ ಹೆಸರನ್ನೇ ಈ ಜಿಲ್ಲೆಗೆ ಇಡಲಾಗಿದೆ. ಇದು ಗೋವಾದ ಭೌಗೋಳಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಎತ್ತಿಹಿಡಿಯಲಿದೆ ಎಂದು ಸಿಎಂ ತಿಳಿಸಿದ್ದಾರೆ.
ಐತಿಹಾಸಿಕವಾಗಿಯೂ ಈ ಪ್ರದೇಶ ಅತ್ಯಂತ ಮಹತ್ವದ್ದಾಗಿದೆ. ಕುಶಾವತಿ ನದಿ ದಡದಲ್ಲಿ 4ನೇ ಶತಮಾನದ ಚಾಲುಕ್ಯರ ಕಾಲದ ಅಪರೂಪದ ಶಿಲಾ ಕೆತ್ತನೆಗಳಿದ್ದು (Rock Carvings), ಇವು ಜಾಗತಿಕ ಮಟ್ಟದಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿವೆ. ಹೀಗಾಗಿ, ಹೊಸ ಜಿಲ್ಲೆಯನ್ನು ಸಾಂಸ್ಕೃತಿಕ ಮತ್ತು ಪರಿಸರ ಪ್ರವಾಸೋದ್ಯಮದ ಪ್ರಮುಖ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದು ಸರ್ಕಾರದ ಉದ್ದೇಶವಾಗಿದೆ. ಸದ್ಯಕ್ಕೆ ನೂತನ ಜಿಲ್ಲೆಯ ಆಡಳಿತಾತ್ಮಕ ಕಾರ್ಯಗಳು ದಕ್ಷಿಣ ಗೋವಾ ಜಿಲ್ಲಾ ಕೇಂದ್ರದಿಂದಲೇ ನಡೆಯಲಿವೆ ಎಂದು ಸಾವಂತ್ ಸ್ಪಷ್ಟಪಡಿಸಿದ್ದಾರೆ.






