ಮೈಸೂರು: ಹುಲಿ ದಾಳಿ ಮತ್ತು ಮಾನವ-ವನ್ಯಜೀವಿ ಸಂಘರ್ಷದ ಹಿನ್ನೆಲೆಯಲ್ಲಿ ಕಳೆದ ನವೆಂಬರ್‌ನಿಂದ ಸ್ಥಗಿತಗೊಂಡಿದ್ದ ಬಂಡೀಪುರ (Bandipur) ಮತ್ತು ನಾಗರಹೊಳೆ(Nagarahole) ಸಫಾರಿಯನ್ನು ಹಂತ ಹಂತವಾಗಿ ಪುನರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಪ್ರವಾಸೋದ್ಯಮದ ಮೇಲೆ ಬಿದ್ದ ಹೊಡೆತ ಮತ್ತು ಸ್ಥಳೀಯರ ಜೀವನೋಪಾಯದ ಕಳಕಳಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಸಫಾರಿಯನ್ನು ಒಮ್ಮೆಲೇ ಆರಂಭಿಸದೆ, ಪರಿಸ್ಥಿತಿಯನ್ನು ಅವಲೋಕಿಸಿ ಹಂತಹಂತವಾಗಿ ಅವಕಾಶ ನೀಡುವಂತೆ ಅರಣ್ಯ ಇಲಾಖೆಗೆ ಸಿಎಂ (CM) ಸೂಚಿಸಿದ್ದಾರೆ.
ಹುಲಿಗಳು ಕಾಡಿನಿಂದ ನಾಡಿಗೆ ಬರಲು ಸಫಾರಿ ವಾಹನಗಳ ಕಿರಿಕಿರಿ ಕಾರಣವೇ? ಅಥವಾ ಅರಣ್ಯದ ಧಾರಣಾ ಸಾಮರ್ಥ್ಯ ಮೀರಿ ಹುಲಿಗಳ ಸಂಖ್ಯೆ ಹೆಚ್ಚಾಗಿದೆಯೇ? ಎಂಬ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ನೀಡಲು ತಜ್ಞರ ಸಮಿತಿ ರಚಿಸಲಾಗುವುದು. ಸಫಾರಿ ಬಂದ್ ಆಗಿದ್ದರಿಂದ ನೂರಾರು ಗೈಡ್‌ಗಳು, ವಾಹನ ಚಾಲಕರು ಮತ್ತು ರೆಸಾರ್ಟ್ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದರು. ಅವರ ಹಿತದೃಷ್ಟಿಯಿಂದ ಸಫಾರಿ ಆರಂಭಿಸುವುದು ಅನಿವಾರ್ಯ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಇದೇ ವೇಳೆ ವನ್ಯಜೀವಿ ಮಂಡಳಿ ಸದಸ್ಯರೂ ಆಗಿರುವ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಮಾತನಾಡಿ, “ಸಫಾರಿಯಿಂದಲೇ ಪ್ರಾಣಿಗಳು ಹೊರಬರುತ್ತವೆ ಎನ್ನಲು ಪುರಾವೆಗಳಿಲ್ಲ, ಸಫಾರಿ ಕೇವಲ ಶೇ. 8ರಷ್ಟು ಕಾಡಿನಲ್ಲಿ ಮಾತ್ರ ನಡೆಯುತ್ತದೆ ಎಂದು ಹೇಳಿದರು.






