Home State Politics National More
STATE NEWS

‘Shankh Air’ ಮೂಲಕ ಆಕಾಶಕ್ಕೆ ಏಣಿ ಹಾಕಿದ ಶ್ರವಣ್ ಕುಮಾರ್: ಟೆಂಪೋ ಚಾಲಕನಾಗಿದ್ದವ ಇಂದು ವಿಮಾನಯಾನ ಸಂಸ್ಥೆಯ ಒಡೆಯ!

Image (6)
Posted By: Meghana Gowda
Updated on: Jan 3, 2026 | 7:43 AM

ಉತ್ತರ ಪ್ರದೇಶ: ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಛಲವೊಂದಿದ್ದರೆ ಸಾಕು, ಎಂತಹ ಬಡತನವನ್ನೂ ಮೆಟ್ಟಿ ನಿಲ್ಲಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಶ್ರವಣ್ ಕುಮಾರ್ ವಿಶ್ವಕರ್ಮ (Shravan Kumar Vishwakarma) ಅವರೇ ಸಾಕ್ಷಿ. ಒಂದು ಕಾಲದಲ್ಲಿ ಜೀವನೋಪಾಯಕ್ಕಾಗಿ ಟೆಂಪೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇಂದು ಭಾರತದ ಅತೀ ಹೊಸ ವಿಮಾನಯಾನ ಸಂಸ್ಥೆ ‘ಶಂಖ್ ಏರ್’ (Shankh Air) ನ ಮಾಲೀಕನಾಗಿ ಬೆಳೆದು ನಿಂತಿದ್ದಾರೆ.

ಸಾಮಾನ್ಯ ಆರಂಭ, ಅಸಾಮಾನ್ಯ ಕನಸು:

ಶ್ರವಣ್ ಕುಮಾರ್ ಅವರು ಕಾನಪುರದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ಹಲವು ವರ್ಷಗಳ ಕಾಲ ಅವರು ಟೆಂಪೋ ಚಾಲಕನಾಗಿ ಮತ್ತು ಲೋಡರ್ ಆಗಿ ಕೆಲಸ ಮಾಡಿದರು. ದಿನನಿತ್ಯದ ಬಡತನದ ನಡುವೆಯೂ ಅವರಿಗೆ ಆಕಾಶದಲ್ಲಿ ಹಾರುವ ವಿಮಾನಗಳ ಬಗ್ಗೆ ಅತೀವ ಆಸಕ್ತಿ ಇತ್ತು. 35ನೇ ವಯಸ್ಸಿನಲ್ಲಿ ಅವರು ಕಂಡ ಕನಸು ಇಂದು ನನಸಾಗಿದೆ.

2014ರಲ್ಲಿ ಸಿಮೆಂಟ್ ವ್ಯಾಪಾರದ ಮೂಲಕ ಉದ್ಯಮ ರಂಗಕ್ಕೆ ಕಾಲಿಟ್ಟ ಶ್ರವಣ್ ಕುಮಾರ್ ಹಂತ ಹಂತವಾಗಿ ಸಿಮೆಂಟ್‌ನಿಂದ ಹಿಡಿದು ಟಿಎಂಟಿ ಸ್ಟೀಲ್, ಗಣಿಗಾರಿಕೆ ಮತ್ತು ಸಾರಿಗೆ ರಂಗಕ್ಕೆ ಉದ್ಯಮವನ್ನು ವಿಸ್ತರಿಸಿದ ಅವರು ಇಂದು  400ಕ್ಕೂ ಹೆಚ್ಚು ಟ್ರಕ್‌ಗಳ ಬೃಹತ್ ಲೋಜಿಸ್ಟಿಕ್ಸ್ ಸಂಸ್ಥೆಯನ್ನು ಹೊಂದಿದ್ದಾರೆ. ಇದೇ ಹಣಕಾಸಿನ ನೆರವು ಅವರ ವಿಮಾನಯಾನದ ಕನಸಿಗೆ ಬಲ ನೀಡಿತು.

ಶಂಖ್ ಏರ್ ಸ್ಥಾಪನೆ :

ನಾಲ್ಕು ವರ್ಷಗಳ ಹಿಂದೆ ಅವರು ವಿಮಾನಯಾನ ಕ್ಷೇತ್ರಕ್ಕೆ ಪ್ರವೇಶಿಸಲು ನಿರ್ಧರಿಸಿದರು. ನಿಯಮಗಳು ಮತ್ತು ಕಾರ್ಯಾಚರಣೆಯ ಬಗ್ಗೆ ಶೂನ್ಯದಿಂದ ಅಧ್ಯಯನ ನಡೆಸಿದರು. ಎಲ್ಲಾ ನಿಯಂತ್ರಕ ಅನುಮೋದನೆಗಳನ್ನು ಪಡೆದ ನಂತರ, 2026ರ ಆರಂಭದಲ್ಲಿ ‘ಶಂಖ್ ಏರ್’ ಹಾರಾಟ ಆರಂಭಿಸಲು ಸಜ್ಜಾಗಿದೆ.

ಆರಂಭಿಕ ಹಂತದಲ್ಲಿ  3 ಏರ್‌ಬಸ್ ವಿಮಾನಗಳೊಂದಿಗೆ ಲಕ್ನೋದಿಂದ ದೆಹಲಿ ಮತ್ತು ಮುಂಬೈಗೆ ವಿಮಾನಗಳು ಹಾರಲಿವೆ.  ಮಧ್ಯಮ ವರ್ಗದವರಿಗೂ ವಿಮಾನಯಾನ ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡುವುದು ಇವರ ಮುಖ್ಯ ಉದ್ದೇಶವಾಗಿದೆ.

ನಾವು ಎಲ್ಲಿಂದ ಬಂದಿದ್ದೇವೆ ಎಂಬುದು ಮುಖ್ಯವಲ್ಲ, ಎಲ್ಲಿಗೆ ತಲುಪಬೇಕು ಎಂಬ ಛಲ ಮುಖ್ಯ.  ಟೆಂಪೋ ಸ್ಟೀರಿಂಗ್‌ನಿಂದ ವಿಮಾನದ ಕಾಕ್‌ಪಿಟ್‌ವರೆಗೆ ಸಾಗಿಬಂದ ಈ ಹಾದಿ, ಸೋಲೊಪ್ಪದ ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೂ ಸ್ಫೂರ್ತಿಯ ಸೆಲೆ. 2026ರಲ್ಲಿ ಶಂಖ್ ಏರ್ ಹಾರಾಟ ಆರಂಭಿಸಿದಾಗ, ಅದು ಕೇವಲ ಆಕಾಶದಲ್ಲಿ ಒಂದು ವಿಮಾನವಾಗಿರುವುದಿಲ್ಲ.  ಬದಲಿಗೆ ಸಾವಿರಾರು ಕನಸುಗಾರರ ಭರವಸೆಯ ರೆಕ್ಕೆಯಾಗಿರುತ್ತದೆ ಎಂದು ಹೇಳಿದರೆ ತಪ್ಪಾಗದು.

Shorts Shorts