ತುಮಕೂರು: ಮೂಕ ಪ್ರಾಣಿಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ರೈತ ಮಹಿಳೆಯೊಬ್ಬರಿಗೆ ವಿಧಿಯಾಟ ಬರಸಿಡಿಲಿನಂತೆ ಎರಗಿದೆ. ಮೇಯಲು ಹೋದ ಕುರಿಗಳು ಜೋಳದ ಸಿಪ್ಪೆ ತಿಂದ ಪರಿಣಾಮ, ಒಂದಲ್ಲ ಎರಡಲ್ಲ ಬರೋಬ್ಬರಿ 50 ಕುರಿಗಳು ಸ್ಥಳದಲ್ಲೇ ಒದ್ದಾಡಿ ಪ್ರಾ*ಣ ಬಿಟ್ಟಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪೆನ್ನೊಬನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಂಪಕ್ಕ ಎಂಬುವವರು ಕುರಿ ಸಾಕಾಣಿಕೆಯನ್ನೇ ಜೀವನಾಧಾರವಾಗಿಸಿಕೊಂಡಿದ್ದರು. ಎಂದಿನಂತೆ ತಮ್ಮ 200ಕ್ಕೂ ಹೆಚ್ಚು ಕುರಿಗಳ ಹಿಂಡನ್ನು ಮೇಯಿಸಲು ಜಮೀನಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಹೊಲದಲ್ಲಿದ್ದ ಜೋಳದ ಸಿಪ್ಪೆ ಮತ್ತು ಚಿಗುರನ್ನು ಕುರಿಗಳು ತಿಂದಿವೆ. ಮೇವು ತಿಂದ ಕೆಲವೇ ಕ್ಷಣಗಳಲ್ಲಿ ಕುರಿಗಳು ಏಕಾಏಕಿ ಕುಸಿದು ಬಿದ್ದು, ನರಳಾಡಿ ಪ್ರಾ*ಣ ಬಿಟ್ಟಿವೆ. ಕಣ್ಣೆದುರೇ 50ಕ್ಕೂ ಹೆಚ್ಚು ಕುರಿಗಳು ಸಾ*ವನ್ನಪ್ಪಿರುವುದನ್ನು ಕಂಡು ಜಂಪಕ್ಕ ತೀವ್ರ ಆಘಾತಕ್ಕೊಳಗಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿ ಕಂಗಾಲಾಗಿದ್ದಾರೆ.
ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪಶುಪಾಲನಾ ಇಲಾಖೆಯ ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸಾಮಾನ್ಯವಾಗಿ ಎಳೆಯ ಜೋಳದ ಚಿಗುರು ಅಥವಾ ಒಣಗಿದ ಸಿಪ್ಪೆಯಲ್ಲಿ ಸೈನೈಡ್ (ಪ್ರುಸಿಕ್ ಆಸಿಡ್) ಅಂಶವಿರುತ್ತದೆ. ಇದನ್ನು ಅತಿಯಾಗಿ ಸೇವಿಸಿದರೆ ಅದು ಪ್ರಾಣಿಗಳ ದೇಹದಲ್ಲಿ ವಿಷವಾಗಿ ಪರಿಣಮಿಸುತ್ತದೆ. ಇಲ್ಲಿಯೂ ಅದೇ ರೀತಿ ಆಗಿರಬಹುದು ಎಂದು ವೈದ್ಯರು ಶಂಕಿಸಿದ್ದಾರೆ.
ಸದ್ಯ ಮೃ*ತ ಕುರಿಗಳ ಮಾದರಿಗಳನ್ನು (ಸ್ಯಾಂಪಲ್) ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ವರದಿ ಬಂದ ಬಳಿಕವಷ್ಟೇ ಸಾ*ವಿಗೆ ನಿಖರ ಕಾರಣ ತಿಳಿದುಬರಲಿದೆ. ಈ ಮಧ್ಯೆ, ಜೀವನಕ್ಕೆ ಆಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ರೈತ ಮಹಿಳೆ ಜಂಪಕ್ಕ ಅವರಿಗೆ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.






