ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ವಿರುದ್ಧ ಅವಹೇಳನಾಕಾರಿ ಪೋಸ್ಟ್ ಹಾಕಿರುವ ಪ್ರಕರಣದಲ್ಲಿ ತಾಂತ್ರಿಕ ಮಾಹಿತಿ ನೀಡಲು ‘ಎಕ್ಸ್’ (X) ಸಂಸ್ಥೆ ಹಿಂದೇಟು ಹಾಕುತ್ತಿದೆ. ಫೇಸ್‌ಬುಕ್ (Facebook) ಮತ್ತು ಇನ್‌ಸ್ಟಾಗ್ರಾಂ (Instagram) ಸಂಸ್ಥೆಗಳು ಅಗತ್ಯ ಮಾಹಿತಿ ನೀಡುತ್ತಿದ್ದರೂ, ‘ಎಕ್ಸ್’ ಮಾತ್ರ ಪೊಲೀಸರ ಪ್ರಶ್ನೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಂಗಳೂರಿನ ಚಂದ್ರಶೇಖರ್ (ಆಟೋ ಚಾಲಕ) ಮತ್ತು ದಾವಣಗೆರೆಯ ನಿತಿನ್ (ಸಾಫ್ಟ್‌ವೇರ್ ಇಂಜಿನಿಯರ್) ಎಂಬುವವರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಹತ್ತಾರು ಫೇಕ್ ಖಾತೆಗಳ ಮೂಲಕ ಅಶ್ಲೀಲ ಕಾಮೆಂಟ್ ಮಾಡಲಾಗಿದೆ. ಈ ಖಾತೆಗಳ ಐಪಿ ಅಡ್ರೆಸ್ ಮತ್ತು ಬಳಕೆದಾರರ ವಿವರಗಳನ್ನು ಪೊಲೀಸರು ಕೇಳಿದ್ದಾರೆ. ಆದರೆ ‘ಎಕ್ಸ್’ ಸಂಸ್ಥೆ ಈ ಮಾಹಿತಿಯನ್ನು ಹಂಚಿಕೊಳ್ಳಲು ತಾಂತ್ರಿಕ ಕಾರಣಗಳನ್ನು ಒಡ್ಡುತ್ತಿದೆ. ಈ ಹಿನ್ನೆಲೆಯಲ್ಲಿ, ಈಗ ಕಾನೂನುಬದ್ಧವಾಗಿ ನ್ಯಾಯಾಲಯದ ಮೂಲಕವೇ ‘ಎಕ್ಸ್’ ಸಂಸ್ಥೆಗೆ ನೋಟಿಸ್ ಜಾರಿ ಮಾಡಲು ಬೆಂಗಳೂರು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ವಿಜಯಲಕ್ಷ್ಮಿ ಅವರು ಇತ್ತೀಚೆಗೆ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿ ತನಿಖೆ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.






