ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆ ಮತ್ತು ರಸ್ತೆ ನಿಯಮ ಉಲ್ಲಂಘನೆಗೆ ಬೇಸತ್ತ ಟೆಕ್ಕಿಯೊಬ್ಬರು ವಿಶಿಷ್ಟ ಪರಿಹಾರ ಕಂಡುಕೊಂಡಿದ್ದಾರೆ. ಪಂಕಜ್ ತನ್ವರ್ ಎಂಬ ಯುವಕ ತಮ್ಮ ಹೆಲ್ಮೆಟ್ ಅನ್ನೇ ‘ಸಂಚಾರಿ ಪೊಲೀಸ್’ ಆಗಿ ಪರಿವರ್ತಿಸಿದ್ದು, ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ಓಡಾಡುವವರನ್ನು ಕ್ಷಣಮಾತ್ರದಲ್ಲಿ ಪತ್ತೆಹಚ್ಚಿ ಪೊಲೀಸರಿಗೆ ದೂರು ನೀಡುವ ‘AI (ಕೃತಕ ಬುದ್ಧಿಮತ್ತೆ)’ ವ್ಯವಸ್ಥೆಯನ್ನು ರೂಪಿಸಿದ್ದಾರೆ.
“ರಸ್ತೆಯಲ್ಲಿನ ಅವಿವೇಕಿ ಜನರನ್ನು ನೋಡಿ ಸುಸ್ತಾಗಿ ನನ್ನ ಹೆಲ್ಮೆಟ್ ಅನ್ನು ಹ್ಯಾಕ್ ಮಾಡಿದ್ದೇನೆ” ಎಂದು ಪಂಕಜ್ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅವರು ಬೈಕ್ ಓಡಿಸುವಾಗ ಹೆಲ್ಮೆಟ್‌ನಲ್ಲಿ ಅಳವಡಿಸಲಾದ ಎಐ ಏಜೆಂಟ್ ರಿಯಲ್ ಟೈಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಕ್ಕಪಕ್ಕದಲ್ಲಿ ಯಾರಾದರೂ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಿದ್ದರೆ, ತಕ್ಷಣವೇ ಅದು ಪತ್ತೆಹಚ್ಚುತ್ತದೆ. ಅಷ್ಟೇ ಅಲ್ಲ, ನಿಯಮ ಉಲ್ಲಂಘಿಸಿದವರ ಫೋಟೋ, ವಾಹನ ಸಂಖ್ಯೆ (Number Plate) ಮತ್ತು ಸ್ಥಳದ ವಿವರಗಳನ್ನು (Location) ಸ್ವಯಂಚಾಲಿತವಾಗಿ ಟ್ರಾಫಿಕ್ ಪೊಲೀಸರಿಗೆ ಇಮೇಲ್ ಮಾಡುತ್ತದೆ.
ಜನವರಿ 3, 2026 ರಂದು ಮಧ್ಯಾಹ್ನ ಹೊರ ವರ್ತುಲ ರಸ್ತೆಯಲ್ಲಿ (Outer Ring Road) ಸಂಚರಿಸುವಾಗ ಹೆಲ್ಮೆಟ್ ರಹಿತ ಸವಾರನೊಬ್ಬನ ವಿವರಗಳನ್ನು ಈ ತಂತ್ರಜ್ಞಾನದ ಮೂಲಕ ಸೆರೆಹಿಡಿದು ಪೊಲೀಸರಿಗೆ ಕಳುಹಿಸಿದ ಸ್ಕ್ರೀನ್‌ಶಾಟ್ ಅನ್ನು ಪಂಕಜ್ ಹಂಚಿಕೊಂಡಿದ್ದಾರೆ. “ಬೆಂಗಳೂರಿಗರೇ, ಇನ್ಮುಂದೆ ಸುರಕ್ಷಿತವಾಗಿ ವಾಹನ ಚಲಾಯಿಸಿ, ಇಲ್ಲದಿದ್ದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
https://x.com/the2ndfloorguy/status/2007800024479264976
ವಿಶೇಷವೆಂದರೆ, ಪಂಕಜ್ ಅವರ ಈ ನವೀನ ಆವಿಷ್ಕಾರಕ್ಕೆ ಬೆಂಗಳೂರು ನಗರ ಪೊಲೀಸರು (Bengaluru City Police) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆಯ ಅಧಿಕೃತ ಖಾತೆಯಿಂದ ಪಂಕಜ್ ಅವರಿಗೆ ಸಂದೇಶ ಕಳುಹಿಸಲಾಗಿದ್ದು, “ನಿಮ್ಮ ಹೆಲ್ಮೆಟ್ ಆಧಾರಿತ ಟ್ರಾಫಿಕ್ ಉಲ್ಲಂಘನೆ ಪತ್ತೆಹಚ್ಚುವ ಪರಿಕಲ್ಪನೆಯನ್ನು ನಾವು ಗಮನಿಸಿದ್ದೇವೆ. ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಇದೊಂದು ವಿನೂತನ ಮತ್ತು ಆಸಕ್ತಿದಾಯಕ ಐಡಿಯಾ ಆಗಿದೆ” ಎಂದು ಶ್ಲಾಘಿಸಿದ್ದಾರೆ. ಅಲ್ಲದೆ, ಈ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಲು ಮತ್ತು ಚರ್ಚಿಸಲು ಆಸಕ್ತಿ ತೋರಿದ್ದಾರೆ. ಈ ಕುರಿತು ಪಂಕಜ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.






