ಫರಿದಾಬಾದ್: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಫರಿದಾಬಾದ್‌ನ 25 ವರ್ಷದ ಯುವತಿಯ ಮೇಲಿನ ಸಾಮೂಹಿಕ ಅತ್ಯಾ*ಚಾರ ಪ್ರಕರಣದಲ್ಲಿ ಹೊಸ ಮತ್ತು ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಕಾಮುಕರು ಕೃತ್ಯ ಎಸಗಿದ್ದು ಸಾಮಾನ್ಯ ವ್ಯಾನ್‌ನಲ್ಲಿ ಅಲ್ಲ, ಬದಲಾಗಿ ರೋಗಿಗಳ ಜೀವ ಉಳಿಸಬೇಕಾದ ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್‌ನಲ್ಲಿ ಎಂಬುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ.
ಬಂಧಿತ ಆರೋಪಿಗಳು ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್‌ನಲ್ಲಿ ಚಾಲಕ ಮತ್ತು ಸಹಾಯಕರಾಗಿ ಕೆಲಸ ಮಾಡುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ಸ್ಪಷ್ಟಪಡಿಸಿದ್ದಾರೆ. ಉತ್ತರ ಪ್ರದೇಶದ ಮಥುರಾ ಮತ್ತು ಝಾನ್ಸಿ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಘಟನೆಯ ನಂತರದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಸಂತ್ರಸ್ಥೆ ಕರಾಳ ರಾತ್ರಿಯ ವಿವರ ನೀಡಿದ್ದಾರೆ. “ನಾನು ಅವರನ್ನು ಮೊದಲೇ ಬಲ್ಲವಳಲ್ಲ. ಲಿಫ್ಟ್ ಕೊಡುವುದಾಗಿ ನಂಬಿಸಿ ಆಂಬ್ಯುಲೆನ್ಸ್‌ಗೆ ಹತ್ತಿಸಿಕೊಂಡರು. ಹತ್ತಿದ ತಕ್ಷಣ ಒಬ್ಬಾತ ನನ್ನ ಪೇಟಿಎಂ (PayTM) ಖಾತೆಗೆ 600 ರೂ. ವರ್ಗಾಯಿಸಿದ. ನಂತರ ಬಾಗಿಲು ಲಾಕ್ ಮಾಡಿ, ನನ್ನ ಮೊಬೈಲ್ ಕಸಿದುಕೊಂಡರು. ಹೊರಗೆ ದಟ್ಟವಾದ ಮಂಜು ಆವರಿಸಿದ್ದರಿಂದ ಎಷ್ಟೇ ಕೂಗಿಕೊಂಡರೂ ಯಾರೂ ಸಹಾಯಕ್ಕೆ ಬರಲಿಲ್ಲ” ಎಂದು ಯುವತಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸೋಮವಾರ ರಾತ್ರಿ ಯುವತಿ ತನ್ನ ಸ್ನೇಹಿತೆಯ ಮನೆಯಿಂದ ಹಿಂತಿರುಗುತ್ತಿದ್ದಾಗ ಮೆಟ್ರೋ ಚೌಕ್ ಬಳಿ ಆಟೋಗಾಗಿ ಕಾಯುತ್ತಿದ್ದರು. ಈ ವೇಳೆ ಮಧ್ಯರಾತ್ರಿ ಸುಮಾರಿಗೆ ಲಿಫ್ಟ್ ನೀಡುವ ನೆಪದಲ್ಲಿ ಬಂದ ಆರೋಪಿಗಳು, ಆಕೆಯನ್ನು ಗುರ್ಗಾಂವ್ ಕಡೆಗೆ ಕರೆದೊಯ್ದು ಚಲಿಸುವ ವಾಹನದಲ್ಲೇ ಅತ್ಯಾ*ಚಾರ ಎಸಗಿದ್ದಾರೆ. ನಂತರ ಮಂಗಳವಾರ ನಸುಕಿನ 3 ಗಂಟೆಯ ಸುಮಾರಿಗೆ ರಾಜಾ ಚೌಕ್ ಬಳಿ ರಸ್ತೆಗೆ ತಳ್ಳಿ ಪರಾರಿಯಾಗಿದ್ದರು.
ಘಟನೆ ನಡೆದು ಆರು ದಿನಗಳಾಗಿದ್ದರೂ ಸಂತ್ರಸ್ತೆ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಚೇತರಿಸಿಕೊಂಡ ನಂತರ ಮ್ಯಾಜಿಸ್ಟ್ರೇಟ್ ಮುಂದೆ ಆರೋಪಿಗಳ ಗುರುತು ಪತ್ತೆ ಪರೇಡ್ ನಡೆಸಲಾಗುವುದು ಮತ್ತು ಹೆಚ್ಚಿನ ವಿಚಾರಣೆಗಾಗಿ ಪ್ರೊಡಕ್ಷನ್ ವಾರೆಂಟ್ ಮೇಲೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.






