ನವದೆಹಲಿ: ಭಾರತದ ಹುಲಿ ಸಂರಕ್ಷಣಾ ಯೋಜನೆಯ ಯಶಸ್ಸಿನ ಕಥೆಯ ಹಿಂದೊಂದು ಕಹಿ ಸತ್ಯ ಅಡಗಿದೆ. ಸಂರಕ್ಷಿತ ಅಭಯಾರಣ್ಯಗಳಿಗಿಂತ ಹೊರಗೆ ಹೆಚ್ಚು ಹುಲಿಗಳು ಸಾವನ್ನಪ್ಪುತ್ತಿವೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2025ರಲ್ಲಿ ದೇಶಾದ್ಯಂತ 166 ಹುಲಿಗಳು ಸಾವನ್ನಪ್ಪಿವೆ. ಇದು 2024ರಲ್ಲಿ ದಾಖಲಾಗಿದ್ದ 126 ಸಾವುಗಳಿಗೆ ಹೋಲಿಸಿದರೆ ಭಾರೀ ಏರಿಕೆಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ದಾಖಲಾದ ಎರಡನೇ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ.
ಕಳೆದ ಐದು ವರ್ಷಗಳಲ್ಲಿ ಒಟ್ಟು 725 ಹುಲಿಗಳು ಸಾವನ್ನಪ್ಪಿದ್ದು, ಇದರಲ್ಲಿ ಶೇ. 51 ರಷ್ಟು ಸಾವುಗಳು ಹುಲಿ ಸಂರಕ್ಷಿತ ಪ್ರದೇಶಗಳ ಹೊರಗೆ ಸಂಭವಿಸಿವೆ. ಇದಕ್ಕೆ ಪ್ರಮುಖ ಕಾರಣ, ದೇಶದ ಶೇ.30 ರಷ್ಟು ಹುಲಿಗಳು ಈಗ ಅಧಿಸೂಚಿತ ಸಂರಕ್ಷಿತ ಪ್ರದೇಶಗಳ ಹೊರಗೆ ಮುಕ್ತವಾಗಿ ಸಂಚರಿಸುತ್ತಿವೆ. ಇದರಿಂದಾಗಿ ಅವು ಮಾನವ-ಪ್ರಾಣಿ ಸಂಘರ್ಷ, ರಸ್ತೆ ಅಪಘಾತಗಳು, ವಿದ್ಯುತ್ ಸ್ಪರ್ಶ ಮತ್ತು ವಿಷಪ್ರಾಶನದಂತಹ ಅಪಾಯಗಳಿಗೆ ತುತ್ತಾಗುತ್ತಿವೆ.
ಈ ಬಗ್ಗೆ ಹೆಸರು ಹೇಳಲಿಚ್ಛಿಸದ ಹಿರಿಯ ಎನ್‌ಟಿಸಿಎ ಅಧಿಕಾರಿಯೊಬ್ಬರು ಮಾತನಾಡಿ, ಸಿಬ್ಬಂದಿ ಕೊರತೆ ಗಂಭೀರ ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ. “ಕ್ಷೇತ್ರ ಮಟ್ಟದಲ್ಲಿ ಸಿಬ್ಬಂದಿಯ ತೀವ್ರ ಕೊರತೆಯಿದೆ. ನಮ್ಮ ವಿಧಿವಿಜ್ಞಾನ ಪ್ರಯೋಗಾಲಯಗಳಲ್ಲಿಯೂ (Forensic Labs) ಸಿಬ್ಬಂದಿ ಕೊರತೆಯಿರುವುದರಿಂದ ಮಾದರಿಗಳ ವಿಶ್ಲೇಷಣೆ ತಡವಾಗುತ್ತಿದೆ. ಇದರಿಂದ ಕಳ್ಳಬೇಟೆಗಾರರನ್ನು ತ್ವರಿತವಾಗಿ ಹಿಡಿದು ಶಿಕ್ಷಿಸಲು ಸಾಧ್ಯವಾಗುತ್ತಿಲ್ಲ” ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು. ತನಿಖೆ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗಿದ್ದು, 2025ರಲ್ಲಿ ಬರೋಬ್ಬರಿ 140 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿವೆ.
‘ಸ್ಟೇಟ್ ಆಫ್ ಟೈಗರ್’ ವರದಿಯ ಪ್ರಕಾರ, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಐದರಲ್ಲಿ ಒಂದು ಹುದ್ದೆ ಖಾಲಿಯಿದೆ. ಕೆಲವು ಕಡೆಗಳಲ್ಲಿ ಅಗತ್ಯವಿರುವ ರಕ್ಷಣಾ ಸಿಬ್ಬಂದಿಯಲ್ಲಿ ಶೇ. 40 ರಷ್ಟು ಕೊರತೆಯಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಕೇಂದ್ರ ಪರಿಸರ ಸಚಿವಾಲಯವು 10 ರಾಜ್ಯಗಳಲ್ಲಿ ಮಾನವ-ಹುಲಿ ಸಂಘರ್ಷ ನಿರ್ವಹಣೆಗಾಗಿ 88 ಕೋಟಿ ರೂ.ಗಳ ಪ್ರಾಯೋಗಿಕ ಯೋಜನೆಯನ್ನು ಘೋಷಿಸಿದೆ. ಆದರೆ, “ಈ ಯೋಜನೆಯು ಮೂಲಭೂತ ಸಮಸ್ಯೆಯಾದ ಸಿಬ್ಬಂದಿ ಕೊರತೆಯನ್ನು ಪರಿಹರಿಸುವುದಿಲ್ಲ,” ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.






