ಮಹಾರಾಷ್ಟ್ರ: ಶಾಲಾ ಕ್ರೀಡಾಕೂಟದ ಸಂಭ್ರಮ ಕ್ಷಣಾರ್ಧದಲ್ಲೇ ಶೋಕಸಾಗರದಲ್ಲಿ ಮುಳುಗಿದ ಮನಕಲಕುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ. ಶಾಲೆಯಲ್ಲಿ ಆಯೋಜಿಸಿದ್ದ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದ 15 ವರ್ಷದ ಬಾಲಕಿಯೊಬ್ಬಳು, ಗೆಲುವಿನ ಬೆನ್ನಲ್ಲೇ ಹೃದಯಾಘಾತದಿಂದ ಸಾ*ವನ್ನಪ್ಪಿದ್ದಾಳೆ.
ಶನಿವಾರ ತಲಸಾರಿ ಪ್ರದೇಶದ ಭಾರತಿ ಅಕಾಡೆಮಿ ಇಂಗ್ಲಿಷ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ನಡೆಯುತ್ತಿತ್ತು. 10ನೇ ತರಗತಿಯ ವಿದ್ಯಾರ್ಥಿನಿ ರೋಷ್ನಿ ಗೋಸ್ವಾಮಿ ಮ್ಯಾರಥಾನ್‌ನಲ್ಲಿ ಭಾಗವಹಿಸಿ, ಗುರಿ ತಲುಪಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಳು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಓಟ ಮುಗಿಸಿದ ತಕ್ಷಣ ಆಕೆಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಸುಸ್ತಾಗಿ ಮೈದಾನದಲ್ಲಿ ಕುಳಿತ ಆಕೆ ಕೆಲವೇ ಕ್ಷಣಗಳಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.
ತಕ್ಷಣವೇ ಶಿಕ್ಷಕರು ಪ್ರಾಥಮಿಕ ಚಿಕಿತ್ಸೆ ನೀಡಲು ಪ್ರಯತ್ನಿಸಿದ್ದಾರೆ ಮತ್ತು ಶಾಲಾ ಸಿಬ್ಬಂದಿ ಆಕೆಯನ್ನು ಖಾಸಗಿ ವಾಹನದಲ್ಲಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲೇ ಆಕೆ ಮೃ*ತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಬಾಲಕಿಗೆ ಹೃದಯಾಘಾತವಾಗಿರಬಹುದು ಎಂದು ಶಾಲೆಯ ಪ್ರಾಂಶುಪಾಲ ರಾಕೇಶ್ ಶರ್ಮಾ ಶಂಕೆ ವ್ಯಕ್ತಪಡಿಸಿದ್ದಾರೆ.
ಮಗಳ ಸಾ*ವಿನ ಸುದ್ದಿಯಿಂದ ತಾಯಿ ಸುನೀತಾಬೆನ್ ಆಘಾತಕ್ಕೊಳಗಾಗಿದ್ದಾರೆ. “ಬೆಳಿಗ್ಗೆ ಎಂದಿನಂತೆ ಎದ್ದು, ಊಟ ಮಾಡಿ, ಮಧ್ಯಾಹ್ನಕ್ಕೆ ಡಬ್ಬಿ ತೆಗೆದುಕೊಂಡು ಶಾಲೆಗೆ ಹೋಗಿದ್ದಳು. ಮ್ಯಾರಥಾನ್ ಓಟದಲ್ಲಿ ಭಾಗವಹಿಸುತ್ತಿದ್ದೇನೆ ಎಂದು ನನ್ನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಹೋಗಿದ್ದಳು. ಆದರೆ ಮಧ್ಯಾಹ್ನ ಆಕೆ ಇನ್ನಿಲ್ಲ ಎಂಬ ಸುದ್ದಿ ಬಂತು” ಎಂದು ಕಣ್ಣೀರು ಹಾಕಿದ್ದಾರೆ.
ಘೋಲ್ವಾಡ್ ಪೊಲೀಸರು ಆಕಸ್ಮಿಕ ಸಾ*ವು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾ*ವಿಗೆ ನಿಖರ ಕಾರಣ ತಿಳಿಯಲಿದೆ ಎಂದಿದ್ದಾರೆ. ಇತ್ತೀಚೆಗೆ ಶಾಲೆಗಳಲ್ಲಿ ವೈದ್ಯಕೀಯ ತಪಾಸಣೆ, ಆಂಬ್ಯುಲೆನ್ಸ್ ಅಥವಾ ಪ್ರಥಮ ಚಿಕಿತ್ಸಾ ವ್ಯವಸ್ಥೆ ಇಲ್ಲದೆ ಬಿಸಿಲಿನಲ್ಲಿ ಇಂತಹ ಕಠಿಣ ಓಟದ ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದಕ್ಕೆ ಸ್ಥಳೀಯ ಶಿಕ್ಷಣ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.






