ವಾಷಿಂಗ್ಟನ್: ಜಾಗತಿಕ ರಾಜಕೀಯದಲ್ಲಿ ಸಂಚಲನ ಮೂಡಿಸುವ ಬೆಳವಣಿಗೆಯೊಂದರಲ್ಲಿ, ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರವು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದಿದೆ. ಶನಿವಾರ ನಡೆದ ಈ ಮಿಂಚಿನ ಸೇನಾ ಕಾರ್ಯಾಚರಣೆಯಲ್ಲಿ ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್ ಸೇರಿದಂತೆ ಪ್ರಮುಖ ಪ್ರದೇಶಗಳ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ‘ನಾರ್ಕೊ-ಬಯೋತ್ಪಾದನೆ’ (ಮಾದಕವಸ್ತು ಕಳ್ಳಸಾಗಣೆ ಪ್ರೇರಿತ ಭಯೋತ್ಪಾದನೆ) ನಿಗ್ರಹದ ಹೆಸರಿನಲ್ಲಿ ಈ ದಾಳಿ ನಡೆದಿದ್ದರೂ, ವೆನೆಜುವೆಲಾದ ತೈಲ ಸಂಪತ್ತಿನ ಮೇಲಿನ ಕಣ್ಣು ಇದರ ಹಿಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ನಿಕೋಲಸ್ ಮಡುರೊ ಅವರನ್ನು ವೆನೆಜುವೆಲಾದಿಂದ ಅಮೆರಿಕಕ್ಕೆ ಕರೆದೊಯ್ಯಲಾಗಿದ್ದು, ಮುಂದಿನ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯುವವರೆಗೂ ಅಮೆರಿಕವೇ ದೇಶವನ್ನು ಮುನ್ನಡೆಸಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಈ ಮಧ್ಯೆ, ಮಡುರೊ ಅವರ ಗೈರುಹಾಜರಿಯಲ್ಲಿ ಉಪಾಧ್ಯಕ್ಷೆ ಡೆಲ್ಸಿ ರಾಡ್ರಿಗಸ್ ಅವರು ದೇಶದ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವಂತೆ ವೆನೆಜುವೆಲಾ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ರಾಜಧಾನಿ ಕ್ಯಾರಕಾಸ್‌ನಲ್ಲಿ ಸ್ಫೋಟದ ಸದ್ದುಗಳು ಮತ್ತು ಯುದ್ಧ ವಿಮಾನಗಳ ಹಾರಾಟ ಕಂಡುಬಂದ ಆರಂಭಿಕ ಹಂತದಲ್ಲಿ ಅಮೆರಿಕದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿರಲಿಲ್ಲ. ಆದರೆ ನಂತರ ತಮ್ಮ ಸಾಮಾಜಿಕ ಜಾಲತಾಣ ‘ಟ್ರುತ್ ಸೋಷಿಯಲ್’ ಮೂಲಕ ಸ್ಪಷ್ಟನೆ ನೀಡಿದ ಟ್ರಂಪ್, “ಅಮೆರಿಕ ಸಂಯುಕ್ತ ಸಂಸ್ಥಾನವು ವೆನೆಜುವೆಲಾ ಮತ್ತು ಅದರ ನಾಯಕ ಮಡುರೊ ವಿರುದ್ಧ ದೊಡ್ಡ ಮಟ್ಟದ ದಾಳಿಯನ್ನು ಯಶಸ್ವಿಯಾಗಿ ನಡೆಸಿದೆ. ಅಧ್ಯಕ್ಷ ಮತ್ತು ಅವರ ಪತ್ನಿಯನ್ನು ಬಂಧಿಸಿ ದೇಶದಿಂದ ಕರೆತರಲಾಗಿದೆ. ಈ ಕಾರ್ಯಾಚರಣೆಯನ್ನು ಅಮೆರಿಕದ ಕಾನೂನು ಜಾರಿ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಲಾಗಿದೆ” ಎಂದು ಪ್ರಕಟಿಸಿದರು.
ಅಮೆರಿಕ ಮತ್ತು ವೆನೆಜುವೆಲಾ ನಡುವಿನ ಉದ್ವಿಗ್ನತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿತ್ತು. ಡೊನಾಲ್ಡ್ ಟ್ರಂಪ್ ಅವರು ಮಡುರೊ ಸರ್ಕಾರದ ವಿರುದ್ಧ ಮಾದಕವಸ್ತು ಕಳ್ಳಸಾಗಣೆ ಮತ್ತು ನಾರ್ಕೊ-ಬಯೋತ್ಪಾದನೆಯ ಗಂಭೀರ ಆರೋಪಗಳನ್ನು ಮಾಡಿದ್ದರು. ಶನಿವಾರದ ದಾಳಿಯು ಈ ಸಂಘರ್ಷವನ್ನು ತಾರಕಕ್ಕೇರಿಸಿದ್ದು, ನ್ಯಾಯ ಮತ್ತು ಏಕಪಕ್ಷೀಯ ದಾದಾಗಿರಿಯ ನಡುವಿನ ಗೆರೆಗಳನ್ನು ಮಸುಕುಗೊಳಿಸಿದೆ ಎಂದು ಅಂತರರಾಷ್ಟ್ರೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.






