ಹಳಿಯಾಳ(ಉತ್ತರಕನ್ನಡ): ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದಾಗಿ ವಿದ್ಯುತ್ ತಂತಿಗಳು ತಗುಲಿ ಸುಮಾರು 15 ಎಕರೆಗೂ ಹೆಚ್ಚು ಕಬ್ಬು ಬೆಳೆ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಹಳಿಯಾಳ–ಯಡೋಗಾ ರಸ್ತೆ ಪಕ್ಕದಲ್ಲಿ ಭಾನುವಾರ ನಡೆದಿದೆ. ಈ ಅಗ್ನಿ ಅವಘಡದಲ್ಲಿ ಆರು ಮಂದಿ ಬಡ ರೈತರು ತಲಾ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಜಮೀನಿನಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದೇ ಈ ಅವಘಡಕ್ಕೆ ಮುಖ್ಯ ಕಾರಣವಾಗಿದೆ. ಜೋತು ಬಿದ್ದ ತಂತಿಗಳು ಗಾಳಿಗೆ ಅಲುಗಾಡಿ ಕಬ್ಬಿನ ಬೆಳೆಗೆ ತಗುಲಿ ಕಿಡಿ ಉಂಟಾಗಿದೆ. ನೋಡನೋಡುತ್ತಿದ್ದಂತೆ ಬೆಂಕಿ ಎಲ್ಲೆಡೆ ಆವರಿಸಿದ್ದು, ಕ್ಷಣಾರ್ಧದಲ್ಲಿ ಬರೋಬ್ಬರಿ 15 ಎಕರೆ ಪ್ರದೇಶದ ಬೆಳೆ ಭಸ್ಮವಾಗಿದೆ.
ಈ ದುರಂತದಲ್ಲಿ ಮಾವುಳು ಹನುಮಂತ ಜಾವಳೆಕರ (3 ಎಕರೆ), ಸಹದೇವ ಬೋಬಾಟಿ (2 ಎಕರೆ), ತಾನಾಜಿ ಮರಾಠೆ (3 ಎಕರೆ), ನಾರಾಯಣ ಅರೆಬೇಡರ (2 ಎಕರೆ), ಗುರುನಾಥ ಡಮ್ಮನಗಿಮಠ (4 ಎಕರೆ) ಹಾಗೂ ಮಹೇಶ ತೋರ್ಲೆಕರ (1 ಎಕರೆ) ಅವರಿಗೆ ಸೇರಿದ ಕಬ್ಬು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.
ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನೊಂದ ರೈತರು, ಹೆಸ್ಕಾಂ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. “ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಲೇ ಪ್ರತಿವರ್ಷ ಇಂತಹ ಅವಘಡಗಳು ಸಂಭವಿಸುತ್ತಿವೆ. ನಮ್ಮ ಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ” ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.






