ಬೆಂಗಳೂರು: ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸಂಧ್ಯಾ ಚಿತ್ರಮಂದಿರದಲ್ಲಿ (Sandhya Theatre) ಮಹಿಳಾ ಶೌಚಾಲಯದೊಳಗೆ ರಹಸ್ಯವಾಗಿ ಕ್ಯಾಮೆರಾ ಇಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಥಿಯೇಟರ್‌ನಲ್ಲಿ ತೆಲುಗಿನ ಖ್ಯಾತ ನಟ ವೆಂಕಟೇಶ್ ಅಭಿನಯದ ‘ನುವ್ವು ನಾಕು ನಚ್ಚಾವ್’ (Nuvvu Naaku Nachav) ಸಿನಿಮಾ ರೀ-ರಿಲೀಸ್ ಆಗಿತ್ತು. ಇದನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಯುವತಿಯರು ಆಗಮಿಸಿದ್ದರು.
ಮಹಿಳೆಯೊಬ್ಬರು ಶೌಚಾಲಯಕ್ಕೆ ಹೋದಾಗ ಅಲ್ಲಿ ಗುಪ್ತವಾಗಿ ಮೊಬೈಲ್ ಕ್ಯಾಮೆರಾ ಇಟ್ಟಿರುವುದು ಪತ್ತೆಯಾಗಿದೆ. ತಕ್ಷಣ ಆಕೆ ಹೊರಬಂದು ವಿಷಯ ತಿಳಿಸಿದಾಗ, ಅಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಅಪ್ರಾಪ್ತನನ್ನು ಸಾರ್ವಜನಿಕರು ಹಿಡಿದು, ಆರೋಪಿಗೆ ಸ್ಥಳದಲ್ಲೇ ‘ಧರ್ಮದೇಟು’ ನೀಡಿ, ನಂತರ ಮಡಿವಾಳ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಡಿವಾಳ ಪೊಲೀಸರು ಆರೋಪಿ ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದು, ಆತನ ಮೊಬೈಲ್‌ನಲ್ಲಿ ಇನ್ಯಾವುದೇ ದೃಶ್ಯಗಳನ್ನು ಸೆರೆಹಿಡಿಯಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.






