ಧಾರವಾಡ: ಕಳೆದ 28 ವರ್ಷಗಳಿಂದ ಸಾಮಾಜಿಕ ಮತ್ತು ಸಾಹಿತ್ಯಿಕ ರಂಗದಲ್ಲಿ ಸಕ್ರಿಯವಾಗಿರುವ ಜಗಜ್ಯೋತಿ ಕಲಾವೃಂದವು(Jagajyothi Kalavrinda) 2025ನೇ ಸಾಲಿನ ಅಖಿಲ ಭಾರತ ಮಟ್ಟದ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಸಾಹಿತ್ಯ ಪ್ರಶಸ್ತಿಗಳನ್ನು ಘೋಷಿಸಿದೆ. ಈ ಬಾರಿ ಕಥಾ ವಿಭಾಗದಲ್ಲಿ ಶ್ರೀಮತಿ ಪ್ರಜ್ಞಾ ಮತ್ತಿಹಳ್ಳಿ ಹಾಗೂ ಕವನ ವಿಭಾಗದಲ್ಲಿ ಶ್ರೀಮತಿ ತೇಜಾವತಿ ಎಚ್.ಡಿ. ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಾವ್ಯ ಪ್ರಶಸ್ತಿ ವಿಜೇತರು: ಶ್ರೀಮತಿ ತೇಜಾವತಿ ಎಚ್.ಡಿ. (Tejavathi H.D) ಅವರು ಮೂಲತಃ ತುಮಕೂರಿನವರು. ಇವರು ಸರ್ಕಾರಿ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ‘ಕಾಲಚಕ್ರ’, ‘ಬಾ ಭವಿಷ್ಯದ ನಕ್ಷತ್ರಗಳಾಗೋಣ’ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರ ಕವಿತೆಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ.
ಕಥಾ ಪ್ರಶಸ್ತಿ ವಿಜೇತರು: ಶ್ರೀಮತಿ ಪ್ರಜ್ಞಾ ಮತ್ತಿಹಳ್ಳಿ(Prajna Mattihalli). ಇವರು ಎಂ.ಕಾಂ, ಎಂ.ಫಿಲ್ ಮತ್ತು ಪಿಎಚ್‌ಡಿ ಪದವೀಧರರಾಗಿ, ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರ ಜೊತೆಗೆ ಸಾಹಿತ್ಯ ರಚನೆಯಲ್ಲಿ ‘ಹುಡುಗಿ ನಕ್ಕಾಗ’, ‘ಗಂಧಗಾಳಿ’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ 2015ರ ವಿಭಾ ಸಾಹಿತ್ಯ ಪ್ರಶಸ್ತಿ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.
ಅಕ್ಷರ ಲೋಕದ ಈ ಇಬ್ಬರು ಸಾಧಕಿಯರು ಶಿಕ್ಷಣ ಕ್ಷೇತ್ರದ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿರುವುದು ಹೆಮ್ಮೆಯ ವಿಷಯ. ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ‘ಜಗಜ್ಯೋತಿ ಕಲಾವೃಂದ’ದ ಈ ಕಾರ್ಯವು ಕನ್ನಡ ಸಾರಸ್ವತ ಲೋಕಕ್ಕೆ ಮತ್ತಷ್ಟು ಕಳೆಯನ್ನು ತಂದು ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.






