ರಾಮನಗರ: ಇತ್ತೀಚೆಗೆ ಮಾಗಡಿ ತಾಲೂಕು ಕಚೇರಿಯ ಸಭೆಯಲ್ಲಿ “ಕೆಲಸ ಮಾಡದಿದ್ದರೆ ಜನರು ಚಪ್ಪಲಿಯಿಂದ ಹೊಡೆಯುತ್ತಾರೆ” ಎಂದು ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಅವಾಚ್ಯವಾಗಿ ಬೈದಿದ್ದ ಶಾಸಕ ಹೆಚ್.ಸಿ. ಬಾಲಕೃಷ್ಣ (H.C. Balakrishna), ಈಗ ಸರ್ಕಾರಿ ನೌಕರರ ಕ್ರೀಡಾಕೂಟದ ವೇದಿಕೆಯಲ್ಲೇ ಕ್ಷಮೆ ಕೇಳಿದ್ದಾರೆ.
ತಾಲೂಕು ಕ್ರೀಡಾಕೂಟದ ವೇದಿಕೆಯ ಮೇಲೆ ತಹಶೀಲ್ದಾರ್ ಶರತ್ ಕುಮಾರ್ (Tahsildar Sharath Kumar) ಅವರ ಸಮ್ಮುಖದಲ್ಲೇ ಶಾಸಕರು ತಮ್ಮ ಮಾತಿನಿಂದ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ (Apology)ಎಂದು ಕೋರಿದರು.
ಜನರ ಕೆಲಸ ಮಾಡುತ್ತಾರೆ ಎಂದು ಒಂದು ರೂಪಾಯಿ ಅಪೇಕ್ಷಿಸದೆ ತಾಲೂಕಿಗೆ ಕರೆತಂದೆ. ಆದರೆ ರೈತರ ಸಮಸ್ಯೆ ಬಗೆಹರಿಯದಿದ್ದರೆ ಹಳ್ಳಿಗಾಡಿನಿಂದ ಬಂದ ನಾನು ಸಹಜವಾಗಿ ಆಡುಭಾಷೆಯಲ್ಲಿ ಮಾತನಾಡಿದ್ದೇನೆ. ಅಧಿಕಾರಿಗಳು ಲಂಚ ಪಡೆದರೆ ಕೂಲಿ ಮಾಡುವ ರೈತ ಎಲ್ಲಿಂದ ಹಣ ತರುತ್ತಾನೆ? ಜನರು ನಿಮ್ಮನ್ನು ಬೈಯುವುದಿಲ್ಲ, ಶಾಸಕನಾದ ನನ್ನನ್ನು ಬೈಯುತ್ತಾರೆ. ಜನರ ಕೆಲಸ ಮಾಡಿ ಎಂದು ಹೇಳುವ ಉದ್ದೇಶವಿತ್ತೇ ಹೊರತು ನೋಯಿಸುವ ಉದ್ದೇಶವಿರಲಿಲ್ಲ ಎಂದರು.
ಇದೇ ವೇಳೆ ದಕ್ಷ ಅಧಿಕಾರಿ ಡಿ.ಕೆ. ರವಿ ಅವರ ಹೆಸರನ್ನು ಉಲ್ಲೇಖಿಸಿದ ಶಾಸಕರು, “ಒಳ್ಳೆಯ ಅಧಿಕಾರಿಗಳಿದ್ದರೆ ಜನರೇ ಪೂಜಿಸುತ್ತಾರೆ. ಈಗ ಒಳ್ಳೆಯ ಅಧಿಕಾರಿಗಳನ್ನು ಹುಡುಕಲು ದುರ್ಬೀನು ಹಾಕಬೇಕಾದ ಸ್ಥಿತಿ ಇದೆ ಎಂದು ಮಾರ್ಮಿಕವಾಗಿ ನುಡಿದರು.






