ಬೆಂಗಳೂರು: ನಗರದ ರಾಮಮೂರ್ತಿನಗರ (Ramamurthy Nagar) ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಮಣ್ಯ ಲೇಔಟ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಮಂಗಳೂರು ಮೂಲದ ಯುವತಿ ಶರ್ಮಿಳಾ (34) (Sharmila) ಅವರು ದುರ್ಮರಣಕ್ಕೀಡಾಗಿದ್ದಾರೆ. ಜನವರಿ 3ರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಂಗಳೂರು ಮೂಲದ ಕುಶಾಲಪ್ಪ ಅವರ ಪುತ್ರಿ ಶರ್ಮಿಳಾ, ಅಕ್ಸೆಂಚರ್ (Accenture) ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸದ ನಿಮಿತ್ತ ಒಂದು ವರ್ಷದ ಹಿಂದೆಯಷ್ಟೇ ಇವರು ಬೆಂಗಳೂರಿಗೆ ಬಂದಿದ್ದರು. ಜ.3ರ ರಾತ್ರಿ ಸುಮಾರು 10:30ಕ್ಕೆ ಶರ್ಮಿಳಾ ಅವರ ರೂಮ್‌ನಿಂದ ಬೆಂಕಿ ಕಾಣಿಸಿಕೊಂಡು ಹೊಗೆ ಬರುತ್ತಿರುವುದನ್ನು ಮನೆ ಮಾಲೀಕ ವಿಜಯೇಂದ್ರ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
ಅಗ್ನಿಶಾಮಕ ದಳ ಮತ್ತು ಪೊಲೀಸರು ಬಾಗಿಲು ಒಡೆದು ಒಳಗೆ ಹೋದಾಗ ಮನೆ ಪೂರ್ತಿ ಹೊಗೆ ತುಂಬಿಕೊಂಡಿತ್ತು. ಬೆಂಕಿ ನಂದಿಸಿ ಪರಿಶೀಲಿಸಿದಾಗ ಶರ್ಮಿಳಾ ಅವರು ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.
ಕೋಣೆಯಲ್ಲಿ ಬೆಂಕಿ ಬಿದ್ದ ಪರಿಣಾಮ ಹೊರಬರಲಾಗದೆ ಹೊಗೆಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮನೆಯಲ್ಲಿದ್ದ ಬೆಡ್, ಕರ್ಟನ್ ಸೇರಿದಂತೆ ಬೆಲೆಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿವೆ.
ಸಾವು ನಿಗೂಢವಾಗಿದ್ದು, ಇದು ಶಾರ್ಟ್ ಸರ್ಕ್ಯೂಟ್, ಬೆಡ್ ಲ್ಯಾಂಪ್ ಅಥವಾ ಮೇಣದ ಬತ್ತಿಯಿಂದ ಬೆಂಕಿ ಹೊತ್ತಿಕೊಂಡಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಗೂ ಸ್ಥಳಕ್ಕೆ ಸೋಂಕೋ ಟೀಮ್ (FSL) ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದ್ದು, ವರದಿ ಬಂದ ನಂತರವೇ ಬೆಂಕಿಗೆ ನಿಖರ ಕಾರಣ ತಿಳಿಯಲಿದೆ. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ (UDR) ಅಡಿ ಪ್ರಕರಣ ದಾಖಲಾಗಿದೆ.





