ಅನೇಕಲ್(ಬೆಂಗಳೂರು): “ಕನ್ನಡ ನಿಮ್ಮ ಮನೆಯಲ್ಲಿ ಹೋಗಿ ಮಾತಾಡಿ, ಇಲ್ಲಿ ಕನ್ನಡ ಮಾತನಾಡುವಂತಿಲ್ಲ” ಎಂದು ವಿದ್ಯಾರ್ಥಿಗೆ ಧಮ್ಕಿ ಹಾಕಿದ ಕೇರಳ ಮೂಲದ ಹಾಸ್ಟೆಲ್ ವಾರ್ಡನ್‌ನನ್ನು ಕಾಲೇಜು ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿದೆ. ತಾಲೂಕಿನ ಕಲ್ಕೆರೆ ಸಮೀಪದ ಎಎಂಸಿ (AMC) ಕಾಲೇಜಿನ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ವಾರ್ಡನ್ ಉದ್ಧಟತನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
ಘಟನೆಯ ವಿವರ: ಹಾಸ್ಟೆಲ್ ಕೊಠಡಿಯ ಸ್ವಚ್ಛತೆ ಮತ್ತು ಇತರೆ ಸಮಸ್ಯೆಗಳ ಬಗ್ಗೆ ಪ್ರಶ್ನಿಸಲು ವಿದ್ಯಾರ್ಥಿಯೊಬ್ಬ ವಾರ್ಡನ್ ಬಳಿ ತೆರಳಿದ್ದ. ಈ ವೇಳೆ ವಾರ್ಡನ್ ಸುರೇಶ್ ಎಂಬಾತ ಹಿಂದಿಯಲ್ಲಿ ಉತ್ತರಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಿ “ಕನ್ನಡದಲ್ಲಿ ಮಾತನಾಡಿ” ಎಂದು ಕೇಳಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ವಾರ್ಡನ್, “ನೀವು ಇಲ್ಲಿ ಕನ್ನಡದಲ್ಲಿ ಮಾತನಾಡುವಂತಿಲ್ಲ, ಬೇಕಿದ್ದರೆ ನಿಮ್ಮ ಮನೆಯಲ್ಲಿ ಹೋಗಿ ಮಾತಾಡಿ” ಎಂದು ವಿದ್ಯಾರ್ಥಿಗೆ ದಬಾಯಿಸಿದ್ದಾನೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕನ್ನಡಪರ ಸಂಘಟನೆಗಳು ಕಾಲೇಜಿಗೆ ಮುತ್ತಿಗೆ ಹಾಕಿ, ವಾರ್ಡನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತೀವ್ರ ಪ್ರತಿಭಟನೆ ನಡೆಸಿದವು. ಪ್ರತಿಭಟನೆಗೆ ಮಣಿದ ಎಎಂಸಿ ಕಾಲೇಜು ಆಡಳಿತ ಮಂಡಳಿ, ಆರೋಪಿ ವಾರ್ಡನ್ ಸುರೇಶ್‌ನನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.






