ಬಳ್ಳಾರಿ: ಶಾಸಕ ಸತೀಶ್ ರೆಡ್ಡಿ ಅವರ ಬೆಂಬಲಿಗ ರಾಜಶೇಖರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿರುವ ಗನ್‌ಮ್ಯಾನ್ ಗುರುಚರಣ್ ಸಿಂಗ್ (Gunman Gurucharan Singh), ತಾವೇ ಗುಂಡು ಹಾರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ತಮ್ಮ ಗುಂಡೇಟಿನಿಂದ ರಾಜಶೇಖರ್ (Rajshekhar) ಮೃತಪಟ್ಟಿಲ್ಲ ಎಂಬ ಗೊಂದಲದ ಹೇಳಿಕೆ ನೀಡುವ ಮೂಲಕ ತನಿಖೆಯನ್ನು ರೋಚಕ ಘಟ್ಟಕ್ಕೆ ತಲುಪಿಸಿದ್ದಾರೆ.
ಗಲಾಟೆ ವೇಳೆ ಆತ್ಮರಕ್ಷಣೆಗಾಗಿ ನಾನು ಗಾಳಿಯಲ್ಲಿ ಗುಂಡು ಹಾರಿಸಿದೆ. ಆದರೆ ನಾನು ರಾಜಶೇಖರ್ ಮೇಲೆ ಗುಂಡು ಹಾರಿಸಿಲ್ಲ” ಎಂದು ಗುರುಚರಣ್ ಸಿಂಗ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಗಲಾಟೆಯ ವೇಳೆ ಸೆರೆಯಾಗಿದ್ದ ವಿಡಿಯೋ ಆಧರಿಸಿ ಪೊಲೀಸರು ಗುರುಚರಣ್ ಸಿಂಗ್ ಅವರನ್ನು ಬಂಧಿಸಿದ್ದರು. ಆದರೆ, ಆತನ ಹೇಳಿಕೆಗೂ ವಿಡಿಯೋದಲ್ಲಿನ ದೃಶ್ಯಗಳಿಗೂ ತಾಳೆಯಾಗುತ್ತಿಲ್ಲ ಎಂದು ತಿಳಿದುಬಂದಿದೆ.
ಈತನು ಸೇರಿದಂತೆ ಒಟ್ಟು ನಾಲ್ವರು ಗನ್‌ಮ್ಯಾನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಎಲ್ಲರ ಹಿನ್ನೆಲೆ ಕಲೆಹಾಕುತ್ತಿದ್ದಾರೆ. ಹಾಗೂ ಅವರು ಬಳಸುತ್ತಿದ್ದ ಗನ್ ಮತ್ತು ಗುಂಡುಗಳನ್ನು ಎಫ್‌ಎಸ್‌ಎಲ್ (FSL) ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರಾಜಶೇಖರ್ ದೇಹದಲ್ಲಿದ್ದ ಗುಂಡು ಇದೇ ಗನ್‌ನಿಂದ ಹಾರಿದೆಯೇ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಮನವಿ ಮಾಡಿದ್ದಾರೆ.
ಹಿಂದಿನ ಹಿನ್ನೆಲೆ:
ಕಳೆದ 7 ತಿಂಗಳಿಂದ ಶಾಸಕ ಸತೀಶ್ ರೆಡ್ಡಿ ಅವರ ಬಳಿ ಗುರುಚರಣ್ ಸಿಂಗ್ ಗನ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಗಲಭೆಯ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಬಳಕೆ ಮಾಡಿದ್ದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ.






