Home State Politics National More
STATE NEWS

TamilNadu ರಾಜಕೀಯದಲ್ಲಿ ಸಂಚಲನ: ಕರೂರು ದುರಂತದ ವಿಚಾರಣೆಗೆ ನಟ ವಿಜಯ್‌ಗೆ CBI ಬುಲಾವ್; ಜ.12ಕ್ಕೆ ಹಾಜರಾಗಲು ಸೂಚನೆ!

Cbi summons actor vijay tvk chief karur stampede case inquiry january
Posted By: Sagaradventure
Updated on: Jan 6, 2026 | 10:19 AM

ಚೆನ್ನೈ: ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ್ದ ಕರೂರು ಕಾಲ್ತುಳಿತ ಪ್ರಕರಣಕ್ಕೆ (Karur Stampede Case) ಸಂಬಂಧಿಸಿದಂತೆ, ಕೇಂದ್ರ ತನಿಖಾ ದಳ (CBI) ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ಹಾಗೂ ಜನಪ್ರಿಯ ನಟ ವಿಜಯ್ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಜನವರಿ 12ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತ್ತು. ಈಗಾಗಲೇ ಟಿವಿಕೆ ಪಕ್ಷದ ಹಲವು ಹಿರಿಯ ನಾಯಕರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇದೀಗ ಅಂತಿಮ ಹಂತದ ತನಿಖೆಯ ಭಾಗವಾಗಿ ಸ್ವತಃ ಪಕ್ಷದ ಮುಖ್ಯಸ್ಥ ವಿಜಯ್ ಅವರನ್ನು ಪ್ರಶ್ನಿಸಲು ನಿರ್ಧರಿಸಲಾಗಿದ್ದು, ಇದರ ಆಧಾರದ ಮೇಲೆ ಆರೋಪ ಪಟ್ಟಿ (Charge Sheet) ಸಲ್ಲಿಸುವ ಬಗ್ಗೆ ಸಿಬಿಐ ತೀರ್ಮಾನ ಕೈಗೊಳ್ಳಲಿದೆ.

ಏನಿದು ದುರಂತ?: ಕಳೆದ ವರ್ಷ ಸೆಪ್ಟೆಂಬರ್ 27, 2025 ರಂದು ಕರೂರಿನ ವೇಲುಸ್ವಾಮಿಪುರಂನಲ್ಲಿ ಟಿವಿಕೆ ಪಕ್ಷದ ರಾಜಕೀಯ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ವಿಜಯ್ ಅವರ ಆಗಮನ ವಿಳಂಬವಾಗಿದ್ದು ಹಾಗೂ ಕಳಪೆ ಜನಸಂದಣಿ ನಿರ್ವಹಣೆಯಿಂದಾಗಿ ಭಾರಿ ನೂಕುನುಗ್ಗಲು ಉಂಟಾಗಿತ್ತು. ಈ ಕಾಲ್ತುಳಿತದಲ್ಲಿ ಬರೋಬ್ಬರಿ 41 ಜನರು ಸಾವನ್ನಪ್ಪಿದ್ದರು ಮತ್ತು ಹಲವರು ಗಾಯಗೊಂಡಿದ್ದರು.

ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿಯೇ ಹೊಸ ಪಕ್ಷ ಕಟ್ಟಿರುವ ವಿಜಯ್ ಅವರಿಗೆ, ಆರಂಭದಲ್ಲೇ ಈ ದುರಂತ ದೊಡ್ಡ ಆಘಾತ ನೀಡಿತ್ತು. ಘಟನೆಯ ನಂತರ ಅಕ್ಟೋಬರ್‌ನಲ್ಲಿ ವಿಜಯ್ ಮೃತರ ಕುಟುಂಬಗಳನ್ನು ಭೇಟಿ ಮಾಡಿ ಕ್ಷಮೆಯಾಚಿಸಿದ್ದರು. ಆದರೆ ಇದೀಗ ಸಿಬಿಐ ವಿಚಾರಣೆ ಎದುರಿಸಬೇಕಾಗಿರುವುದು ವಿಜಯ್ ಮತ್ತು ಅವರ ಪಕ್ಷಕ್ಕೆ ರಾಜಕೀಯವಾಗಿ ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡುವ ಸಾಧ್ಯತೆಯಿದೆ.

Shorts Shorts