ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ (Kyasanur Forest Disease – KFD) ಅಬ್ಬರ ಮತ್ತೆ ಶುರುವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಟ್ಟಿನಮನೆ ಗ್ರಾಮದ 30 ವರ್ಷದ ಯುವಕನಿಗೆ ಈ ಕಾಯಿಲೆ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು ಇಬ್ಬರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಂತಾಗಿದೆ.
ಸೋಂಕಿತ ಯುವಕನಿಗೆ ಪ್ರಸ್ತುತ ಕೊಪ್ಪ ಸರ್ಕಾರಿ ಆಸ್ಪತ್ರೆಯ ವಿಶೇಷ ಕೆ.ಎಫ್.ಡಿ (KFD) ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಯಿಲೆ ದೃಢಪಟ್ಟಿರುವ ಮತ್ತೊಬ್ಬ ಸೋಂಕಿತನಿಗೆ ಬೇರೆ ಆರೋಗ್ಯ ಸಮಸ್ಯೆಗಳಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಆರೋಗ್ಯ ಅಧಿಕಾರಿಗಳ ತಂಡ ಕಟ್ಟಿನಮನೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗ್ರಾಮಸ್ಥರಿಗೆ ಗ್ರಾಮದ ಶುಚಿತ್ವದ ಬಗ್ಗೆ ಮತ್ತು ಕಾಡಿಗೆ ಹೋಗುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.






