ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ನಗರದ ಮಯೂರಾ ಸರ್ಕಲ್ ಬಳಿ ಅಂತರ್ಜಾತಿ ಮದುವೆಯಾದ (Inter-caste Marriage) ನವದಂಪತಿಗಳ ಮೇಲೆ ಯುವತಿಯ ಪೋಷಕರು ಮತ್ತು ಸಂಬಂಧಿಕರು ದಾಳಿ ನಡೆಸಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಮೂಲದ ಸಂದೀಪ್ (24) ಮತ್ತು ಕೀರ್ತನಾ (19) (Sandeep and Keerthana) ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇವರಿಬ್ಬರದ್ದು ಬೇರೆ ಬೇರೆ ಜಾತಿಯಾಗಿದ್ದರಿಂದ (ಸಂದೀಪ್ ಎಸ್ಟಿ ಮತ್ತು ಕೀರ್ತನಾ ಬಲಿಜಿಗ ಸಮುದಾಯ) ಯುವತಿಯ ಮನೆಯಲ್ಲಿ ತೀವ್ರ ವಿರೋಧವಿತ್ತು.
ಮನೆಯವರ ವಿರೋಧದ ನಡುವೆಯೂ ಈ ಜೋಡಿ ಕಳೆದ ದಿನ ಮನೆ ಬಿಟ್ಟು ಹೊರಬಂದು, ಚಿಂತಾಮಣಿ ತಾಲೂಕಿನ ಕೋಟಗಲ್ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮದುವೆಯಾಗಿತ್ತು. ಯುವತಿ ನಾಪತ್ತೆಯಾಗಿರುವ ಬಗ್ಗೆ ಪೋಷಕರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ದಂಪತಿಗಳು ಪೊಲೀಸ್ ಠಾಣೆಗೆ ಹಾಜರಾಗಲು ಬರುತ್ತಿದ್ದಾಗ, ಶಿಡ್ಲಘಟ್ಟದ ಮಯೂರಾ ಸರ್ಕಲ್ ಬಳಿ ಯುವತಿಯ ಕುಟುಂಬಸ್ಥರು ಅಡ್ಡಗಟ್ಟಿ ಕಾರಿನ ಮೇಲೆ ದಾಳಿ ನಡೆಸಿದ್ದಾರೆ.
ಯುವತಿ ಕೀರ್ತನಾ ಅವರು “ನಾನು ಯಾವುದೇ ಕಾರಣಕ್ಕೂ ತಂದೆ-ತಾಯಿ ಜೊತೆ ಹೋಗಲ್ಲ, ಪತಿಯೊಂದಿಗೇ ಇರುತ್ತೇನೆ” ಎಂದು ಪಟ್ಟು ಹಿಡಿದಿದ್ದಾರೆ. ಯುವತಿಯ ಕುಟುಂಬಸ್ಥರು ಈ ಹಿಂದೆ ಸಂದೀಪ್ ಮೇಲೆ ಪೋಕ್ಸೋ (POCSO) ಕೇಸ್ ದಾಖಲಿಸಲು ಪ್ರಯತ್ನಿಸಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಈ ಪ್ರಕರಣ ಕುರಿತಂತೆ ಚಿಕ್ಕಬಳ್ಳಾಪುರದ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲಾಗಿದೆ.






