ಮಂಗಳೂರು: ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಅರುಣ್ ಅವರನ್ನು ವರ್ಗಾವಣೆ ಮಾಡಲು ಅಕ್ರಮ ದಂಧೆಕೋರರು ತೆರೆಮರೆಯಲ್ಲಿ ಭಾರೀ ಕಸರತ್ತು ನಡೆಸುತ್ತಿದ್ದಾರೆ ಎಂಬ ಬಲವಾದ ವದಂತಿಗಳು ಕೇಳಿಬರುತ್ತಿವೆ.
ಕಳೆದ ಆರು ತಿಂಗಳುಗಳಿಂದ ಈ ಇಬ್ಬರು ದಕ್ಷ ಅಧಿಕಾರಿಗಳು ಜಿಲ್ಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಜಿಲ್ಲೆಯಲ್ಲಿ ಪದೇ ಪದೇ ನಡೆಯುತ್ತಿದ್ದ ಕೋಮು ಗಲಭೆಗಳಿಗೆ ಬ್ರೇಕ್ ಹಾಕಿದ್ದು ಮಾತ್ರವಲ್ಲದೆ, ಮರಳು ಮಾಫಿಯಾ ಹಾಗೂ ಇತರೆ ಅಕ್ರಮ ಚಟುವಟಿಕೆಗಳನ್ನು ಮಟ್ಟಹಾಕುವಲ್ಲಿ ಈ ಅಧಿಕಾರಿಗಳ ಪಾತ್ರ ಹಿರಿದಿದೆ. ಇವರ ಖಡಕ್ ಆಡಳಿತದಿಂದ ಕಂಗೆಟ್ಟಿರುವ ಅಕ್ರಮ ವ್ಯವಹಾರಸ್ಥರ ಲಾಬಿ ಇದೀಗ ಇವರನ್ನು ಎತ್ತಂಗಡಿ ಮಾಡಿಸಲು ಹವಣಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಶಾಂತಿ ಕಾಪಾಡುವಲ್ಲಿ ಮತ್ತು ಮಾಫಿಯಾ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಈ ಅಧಿಕಾರಿಗಳು ತೋರಿದ ದಿಟ್ಟತನಕ್ಕೆ ಜನಮನ್ನಣೆ ದೊರಕಿದೆ. ಇಂತಹ ಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ನಡೆಯುತ್ತಿರುವ ಒತ್ತಡ ತಂತ್ರಗಳಿಗೆ ರಾಜ್ಯ ಸರ್ಕಾರ ಮಣಿಯಬಾರದು ಮತ್ತು ಇವರನ್ನು ಇಲ್ಲಿಯೇ ಮುಂದುವರಿಸಬೇಕು ಎಂಬುದು ಜಿಲ್ಲೆಯ ಪ್ರಜ್ಞಾವಂತ ನಾಗರಿಕರ ಆಶಯವಾಗಿದೆ.






