ರಾಜಸ್ಥಾನ: ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿ ಕಳ್ಳತನಕ್ಕೆಂದು ಬಂದ ಕಳ್ಳನೊಬ್ಬ, ಒಳಗೆ ನುಗ್ಗಲು ಹೋಗಿ ಅಡುಗೆ ಕೋಣೆಯ ಎಕ್ಸಾಸ್ಟ್ ಫ್ಯಾನ್ (Exhaust Fan) ಕಿಂಡಿಯಲ್ಲಿ ಸಿಲುಕಿಕೊಂಡು ಪರದಾಡಿದ ವಿಚಿತ್ರ ಹಾಗೂ ನಗೆಪಾಟಲಿನ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಸುಭಾಷ್ ಕುಮಾರ್ ರಾವತ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ರಾವತ್ ಅವರ ಕುಟುಂಬ ಜನವರಿ 3ರಂದು ಪ್ರವಾಸಕ್ಕೆ ತೆರಳಿತ್ತು. ಇದನ್ನೇ ಕಾಯುತ್ತಿದ್ದ ಇಬ್ಬರು ಕಳ್ಳರು ಕಳ್ಳತನಕ್ಕೆ ಸ್ಕೆಚ್ ಹಾಕಿದ್ದರು. ಅದರಂತೆ ಒಬ್ಬ ಕಳ್ಳ ಅಡುಗೆ ಕೋಣೆಯ ಎಕ್ಸಾಸ್ಟ್ ಫ್ಯಾನ್ ಅಳವಡಿಸುವ ಕಿಂಡಿಯ ಮೂಲಕ ಒಳ ನುಸುಳಲು ಯತ್ನಿಸಿದ್ದಾನೆ. ಆದರೆ ಆತನ ದೇಹ ಅರ್ಧ ಒಳಗೆ ಹೋಗಿ, ಇನ್ನರ್ಧ ಹೊರಗೆ ಉಳಿದು ಅಲ್ಲಿಯೇ ಸಿಲುಕಿಕೊಂಡಿದ್ದಾನೆ. ಒಳಗೆ ಹೋಗಲೂ ಆಗದೆ, ಹೊರಗೆ ಬರಲೂ ಆಗದೆ ಆತ ನರಳಾಡುತ್ತಿದ್ದ.
ಭಾನುವಾರ (ಜ.4) ರಾತ್ರಿ ಸುಭಾಷ್ ಕುಮಾರ್ ಅವರ ಕುಟುಂಬ ಪ್ರವಾಸ ಮುಗಿಸಿ ಮನೆಗೆ ಮರಳಿದೆ. ಅವರು ಬಂದ ದ್ವಿಚಕ್ರ ವಾಹನದ ಹೆಡ್‌ಲೈಟ್ ಬೆಳಕು ನೇರವಾಗಿ ಅಡುಗೆ ಕೋಣೆಯ ಕಿಟಕಿಗೆ ಬಿದ್ದಿದೆ. ಈ ವೇಳೆ ಕಿಟಕಿಯಿಂದ ವ್ಯಕ್ತಿಯೊಬ್ಬನ ಕಾಲುಗಳು ನೇತಾಡುತ್ತಿರುವುದನ್ನು ಕಂಡು ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಹರಸಾಹಸ ಪಟ್ಟು ಕಿಂಡಿಯಲ್ಲಿ ಸಿಲುಕಿದ್ದ ಕಳ್ಳನನ್ನು ಹೊರತೆಗೆದಿದ್ದಾರೆ.
ವಿಚಾರಣೆ ವೇಳೆ, ತನ್ನೊಂದಿಗೆ ಬಂದಿದ್ದ ಇನ್ನೊಬ್ಬ ಸಹಚರ ಮನೆಯವರು ಬಂದಿದ್ದನ್ನು ನೋಡಿ ಪರಾರಿಯಾಗಿದ್ದಾನೆ ಎಂದು ಸಿಕ್ಕಿಬಿದ್ದ ಕಳ್ಳ ಬಾಯಿಬಿಟ್ಟಿದ್ದಾನೆ. ಅಲ್ಲದೆ, ಯಾರಿಗೂ ಅನುಮಾನ ಬರಬಾರದೆಂದು ತಾವು ಬಂದಿದ್ದ ವಾಹನಕ್ಕೆ ‘ಪೊಲೀಸ್’ ಎಂಬ ಸ್ಟಿಕ್ಕರ್ ಅಂಟಿಸಿಕೊಂಡಿದ್ದೆವು ಎಂದೂ ಒಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.






