ಬೆಂಗಳೂರು: ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚಿರುವ ಬೆನ್ನಲ್ಲೇ ಈಗ ಮಳೆಯ ಮುನ್ಸೂಚನೆಯೂ ಇದೆ. ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತದ (Cyclone) ಎಫೆಕ್ಟ್‌ನಿಂದಾಗಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಇಲಾಖೆ ತಿಳಿಸಿದೆ.
ರಾಜಧಾನಿಯಲ್ಲಿ ಮುಂದಿನ 4 ದಿನಗಳ ಕಾಲ ವಿಪರೀತ ಚಳಿ ಇರಲಿದ್ದು, ಎರಡು ದಿನ ಮೋಡ ಮುಸುಕಿದ ವಾತಾವರಣವಿರುತ್ತದೆ. ವಿಶೇಷವಾಗಿ ಜನವರಿ 9 ಮತ್ತು 10ರಂದು ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಕರ್ನಾಟಕದ (North Karnataka) ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ. ಕರಾವಳಿ ತೀರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚಳಿ ಮುಂದುವರಿಯಲಿದ್ದು, ಕೆಲವು ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆ ಕೂಡ ಇದೆ. ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಕೇರಳ ಕರಾವಳಿಯ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ವಾಯು ಚಂಡಮಾರುತ ಸೃಷ್ಟಿಯಾಗಿದೆ. ಇದರ ಜೊತೆಗೆ ನೈಋತ್ಯ ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದಲ್ಲಿನ ಹವಾಮಾನ ಬದಲಾವಣೆಯೂ ರಾಜ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.






