ಬೆಳಗಾವಿ: ಸಚಿವೆ ಪುತ್ರ ಮೃಣಾಲ್ ಹೆಬ್ಬಾಳಕರ್ ಅವರ ಕಾರು ಚಾಲಕ ಬಸವಂತ ಕಡೋಲ್ಕರ್ ಮೇಲೆ ನಡೆದಿದ್ದ ಚೂರಿ ಇರಿತದ ಪ್ರಕರಣವನ್ನು ಬೆಳಗಾವಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ದಾಖಲಾದ 24 ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಯ್ಯಾ ಪೂಜಾರಿ ಮತ್ತು ನಿತೇಶ್ ಬಡಿಗೇರ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಸವಂತನ ಸ್ನೇಹಿತ ಮದನ ಎಂಬುವವರು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನಲ್ಲಿ ಶಿವಯ್ಯಾ, ನಿತೇಶ್, ಮೌನಪ್ಪ ಮತ್ತು ಸಂಪತ್ತ್ ಎಂಬುವವರ ಹೆಸರನ್ನು ಉಲ್ಲೇಖಿಸಲಾಗಿತ್ತು.
ಎಸಿಪಿ ಶೇರಪ್ಪ ನೇತೃತ್ವದ ತಂಡವು ಘಟನೆ ನಡೆದ ಕೇವಲ 24 ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ಕಮೀಷನರ್ ಭೂಷಣ್ ಬೊರಸೆ (Police Commissioner Bhushan Borase) ತಿಳಿಸಿದ್ದಾರೆ.






