ಬೆಂಗಳೂರು: ರಾಜಧಾನಿಯ ವೈಟ್‌ಫೀಲ್ಡ್ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದ ವಲಸಿಗರ ಕಾಲೋನಿಯಲ್ಲಿ ಆರು ವರ್ಷದ ಬಾಲಕಿಯನ್ನು ಅಪಹರಿಸಿ ಹ*ತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಮೃ*ತ ಬಾಲಕಿ ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕರ ಮಗಳು ಎಂದು ಗುರುತಿಸಲಾಗಿದೆ. ಮಗುವಿನ ತಂದೆ ಇಂಜಾಮುಲ್ ಶೇಖ್ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಘಟನೆಯ ವಿವರ: ಜನವರಿ 5ರ ಮಧ್ಯಾಹ್ನದಿಂದಲೇ ಬಾಲಕಿ ಕಾಣೆಯಾಗಿದ್ದಳು. ಮರುದಿನ (ಜ. 6) ಬಾಲಕಿಯ ತಂದೆ ಇಂಜಾಮುಲ್ ಶೇಖ್ ಪೊಲೀಸ್ ಠಾಣೆಗೆ ದೂರು ನೀಡಿ, ತಮ್ಮ ಮನೆಯ ಸಮೀಪ ವಾಸವಿದ್ದ ಪಶ್ಚಿಮ ಬಂಗಾಳ ಮೂಲದ ಮತ್ತೊಬ್ಬ ಕಾರ್ಮಿಕ ಯೂಸುಫ್ ಮೀರ್ ಎಂಬಾತನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಸಂತ್ರಸ್ತ ಕುಟುಂಬ ಮತ್ತು ಆರೋಪಿ ಇಬ್ಬರೂ ದಿನಗೂಲಿ ಹಾಗೂ ಚಿಂದಿ ಆಯುವ ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹುಡುಕಾಟ ನಡೆಸಿದಾಗ ಸಮೀಪದ ಒಣಗಿದ ಕಾಲುವೆಯೊಂದರಲ್ಲಿ ಬಾಲಕಿಯ ಮೃ*ತದೇಹ ಪತ್ತೆಯಾಗಿದೆ. “ಪ್ರಾಥಮಿಕ ತನಿಖೆಯ ಪ್ರಕಾರ ಬಾಲಕಿಯನ್ನು ಕತ್ತು ಹಿಸುಕಿ ಕೊ*ಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಮೇಲ್ನೋಟಕ್ಕೆ ಲೈಂ*ಗಿಕ ದೌರ್ಜನ್ಯದ ಕುರುಹುಗಳು ಕಂಡುಬಂದಿಲ್ಲವಾದರೂ, ಮರ*ಣೋತ್ತರ ಪರೀಕ್ಷಾ ವರದಿ ಬಂದ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಆರೋಪಿ ಯೂಸುಫ್ ಮೀರ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಯ ವಿರುದ್ಧ ಅಪಹರಣ ಮತ್ತು ಕೊ*ಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.






