ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷಗಳ ಬಾಕಿ ಇರುವಂತೆಯೇ ಮೈಸೂರು ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ನಡುವೆ ಗುದ್ದಾಟ ಆರಂಭವಾಗಿದೆ. ಚಾಮರಾಜ ಕ್ಷೇತ್ರದ ಟಿಕೆಟ್‌ಗಾಗಿ ಮಾಜಿ ಸಂಸದ ಪ್ರತಾಪ್ ಸಿಂಹ (MP Pratap Simha) ಮತ್ತು ಮಾಜಿ ಶಾಸಕ ಎಲ್. ನಾಗೇಂದ್ರ (L. Nagendra) ನಡುವೆ ಬಹಿರಂಗ ವಾಕ್ಸಮರ ನಡೆಯುತ್ತಿದೆ.
ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗಪಡಿಸಿರುವ ಪ್ರತಾಪ್ ಸಿಂಹ, ಮಾಧ್ಯಮದವರ ಮುಂದೆ ಮಾತನಾಡಿ, ರಾಷ್ಟ್ರ ಮಟ್ಟದ ನಂತರ ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಲು ಸಾಧ್ಯವಿಲ್ಲ, ಸ್ಥಳೀಯ ಮಟ್ಟಕ್ಕೆ ಬರಲೇಬೇಕು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಹಾಗೂ ಚಾಮರಾಜ ಕ್ಷೇತ್ರವು ಸುಶಿಕ್ಷಿತರ ಕ್ಷೇತ್ರವಾಗಿದ್ದು, ಇಲ್ಲಿ ಐದು ವರ್ಷಕ್ಕೊಮ್ಮೆ ಬದಲಾಗುವ ಶಾಸಕರು ಬೇಡ ಎಂಬರ್ಥದಲ್ಲಿ ಎಲ್. ನಾಗೇಂದ್ರ (L Nagendra) ಅವರಿಗೆ ಟಾಂಗ್ ನೀಡಿದ್ದಾರೆ.
ಈ ಕ್ಷೇತ್ರಕ್ಕೆ ಶಂಕರಲಿಂಗೇಗೌಡರ ರೀತಿಯಲ್ಲಿ ಐದು ಬಾರಿ ಆಯ್ಕೆಯಾಗಿ ಅಭಿವೃದ್ಧಿ ಮಾಡುವ ಶಾಸಕರ ಅಗತ್ಯವಿದೆ. ಕವರ್‌ಗೆ ಕಾಸು ಹಾಕಿಕೊಡುವುದನ್ನು ಅಪೇಕ್ಷೆ ಮಾಡುವ ಮತದಾರರು ಈ ಕ್ಷೇತ್ರದಲ್ಲಿಲ್ಲ ಎಂದು ಹೇಳುವ ಮೂಲಕ ರಾಜಕೀಯ ಆಮಿಷಗಳ ಬಗ್ಗೆಯೂ ಮಾತನಾಡಿದ ಅವರು, ಕೊನೆಯದಾಗಿ ಸೀಟು ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದಿದ್ದಾರೆ.
ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಇಬ್ಬರು ನಾಯಕರ ನಡುವೆ ಈಗಿನಿಂದಲೇ ಪೈಪೋಟಿ ಶುರುವಾಗಿದ್ದು, ಇದು ಪಕ್ಷದ ಸಂಘಟನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬಿಜೆಪಿ ನಗರಾಧ್ಯಕ್ಷರೂ ಆಗಿರುವ ಮಾಜಿ ಶಾಸಕ ಎಲ್. ನಾಗೇಂದ್ರ ಅವರ ವಿರುದ್ಧ ಪ್ರತಾಪ್ ಸಿಂಹ ಅವರು ನೇರವಾಗಿಯೇ ಸವಾಲು ಹಾಕುತ್ತಿರುವುದು ಮೈಸೂರು ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.






