ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ (Uttara Kannada) ಹೊನ್ನಾವರ ತಾಲೂಕಿನ ಗೇರುಸೊಪ್ಪ ಸಮೀಪದ ಸುಳೆಮುರ್ಕಿ ಕ್ರಾಸ್ ಬಳಿ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ಇಬ್ಬರು ವ್ಯಕ್ತಿಗಳು ಕಾರಿನಲ್ಲೇ ಬೆಂಕಿಗೆ ಆಹುತಿಯಾಗಿದ್ದಾರೆ. ಅಪಘಾತದ ತೀವ್ರತೆಗೆ ಕಾರು (Car) ಮತ್ತು ಅದರಲ್ಲಿದ್ದವರು ಗುರುತು ಸಿಗದಷ್ಟು ಸುಟ್ಟು ಕರಕಲಾಗಿದ್ದಾರೆ.
ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು, ಬಳಿಕ ಕಂದಕಕ್ಕೆ ಪಲ್ಟಿಯಾಗಿದೆ ಎನ್ನಲಾಗಿದೆ. ಈ ವೇಳೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ವಾಹನ ಹೊತ್ತಿ ಉರಿದಿದೆ.
ಕಾರಿನಲ್ಲಿದ್ದ ಇಬ್ಬರು ಹೊರಬರಲಾರದೆ ಬೆಂಕಿಯ ಜ್ವಾಲೆಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳು ಸಂಪೂರ್ಣ ಸುಟ್ಟು ಹೋಗಿರುವುದರಿಂದ ಅವರ ಗುರುತು ಪತ್ತೆ ಮಾಡುವುದು ಕಷ್ಟವಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಕಾರಿನ ನಂಬರ್ ಪ್ಲೇಟ್ ಕೂಡ ಸುಟ್ಟು ಭಸ್ಮವಾಗಿದ್ದು, ವಾಹನ ಯಾರದ್ದು ಮತ್ತು ಮೃತರು ಯಾರು ಎಂಬುದು ಪೊಲೀಸರಿಗೆ ಸದ್ಯಕ್ಕೆ ಸವಾಲಾಗಿದೆ.
ಸುದ್ದಿ ತಿಳಿದ ಕೂಡಲೇ ಹೊನ್ನಾವರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ ಪೊಲೀಸರು ಕಾರಿನ ಇಂಜಿನ್ ನಂಬರ್ ಅಥವಾ ಇತರ ದಾಖಲೆಗಳ ಮೂಲಕ ಮೃತರ ಪತ್ತೆಗೆ ಜಾಲ ಬೀಸಿದ್ದಾರೆ.






