ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಅತ್ಯಂತ ಅಮಾನುಷ ಘಟನೆ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಕಾರ್ಪೊರೇಟರ್ ನೀಡಿದ ದೂರಿನ ಮೇರೆಗೆ ಠಾಣೆಗೆ ಕರೆತಂದ ಬಿಜೆಪಿ ಮಹಿಳಾ ಕಾರ್ಯಕರ್ತೆಯನ್ನು ಪೊಲೀಸರು ವಿವಸ್ತ್ರಗೊಳಿಸಿ, ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ದೂರಲಾಗಿದೆ.
ಹಲ್ಲೆಗೊಳಗಾದವರನ್ನು ಸುಜಾತಾ ಅಲಿಯಾಸ್ ವಿಜಯಲಕ್ಷ್ಮಿ ಹಂಡಿ ಎಂದು ಗುರುತಿಸಲಾಗಿದೆ. “ಇವರು ಪೊಲೀಸರೋ ಅಥವಾ ಕಾಮುಕ ರಾಕ್ಷಸರೋ?” ಎಂದು ಸಂತ್ರಸ್ತೆಯ ಕಡೆಯವರು ಮತ್ತು ಬಿಜೆಪಿ ಮುಖಂಡರು ಠಾಣೆಯ ಎದುರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಘಟನೆ?: ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮತದಾರರ ಹೆಸರನ್ನು ಡಿಲೀಟ್ (Vote Delete) ಮಾಡಲಾಗುತ್ತಿದೆ ಎಂಬ ವಿಚಾರವಾಗಿ ಕಾಂಗ್ರೆಸ್ ಕಾರ್ಪೊರೇಟರ್ ಸುವರ್ಣ ಕಲ್ಲಕುಂಟ್ಲಾ ಮತ್ತು ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ನಡುವೆ ಗಲಾಟೆ ನಡೆದಿತ್ತು. ಹಿಂದೆ ಕಾಂಗ್ರೆಸ್‌ನಲ್ಲಿದ್ದ ಸುಜಾತಾ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾಗಿದ್ದರು. ಈ ಜಗಳದ ಹಿನ್ನೆಲೆಯಲ್ಲಿ ಕಾರ್ಪೊರೇಟರ್ ಸುವರ್ಣ ಅವರು ಪೊಲೀಸರಿಗೆ ದೂರು ನೀಡಿದ್ದರು.
ಬಂಧನದ ನೆಪದಲ್ಲಿ ಹೀನ ಕೃತ್ಯ?: ಸುವರ್ಣ ಅವರ ದೂರಿನನ್ವಯ ಸುಜಾತಾ ಅವರನ್ನು ಬಂಧಿಸಲು ಕೇಶ್ವಾಪುರ ಪೊಲೀಸರು ಮುಂದಾಗಿದ್ದಾರೆ. ಬಂಧನದ ವೇಳೆ ಸುಜಾತಾ ಪ್ರತಿರೋಧ ತೋರಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಮಹಿಳೆ ಎನ್ನುವುದನ್ನೂ ನೋಡದೆ, ಬಟ್ಟೆ ಬಿಚ್ಚಿಸಿ, ಮೃಗೀಯವಾಗಿ ಥಳಿಸಿದ್ದಾರೆ ಎಂಬುದು ಆರೋಪ. ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ, ಆಡಳಿತ ಪಕ್ಷದವರ ಒತ್ತಡಕ್ಕೆ ಮಣಿದು ಪೊಲೀಸರು ಈ ರೀತಿ ಅತಿರೇಕವಾಗಿ ವರ್ತಿಸಿದ್ದಾರೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಘಟನೆಯು ಹುಬ್ಬಳ್ಳಿಯಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.






