ಹೈದರಾಬಾದ್: ಐಐಟಿ ಹೈದರಾಬಾದ್‌ನ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬರು ಬರೋಬ್ಬರಿ 2.5 ಕೋಟಿ ರೂಪಾಯಿಗಳ ವಾರ್ಷಿಕ ವೇತನದ ಪ್ಯಾಕೇಜ್ (Annual Package) ಪಡೆಯುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಎಡ್ವರ್ಡ್ ನಾಥನ್ ವರ್ಗೀಸ್ ಎಂಬ ಪ್ರತಿಭಾವಂತ ವಿದ್ಯಾರ್ಥಿ ಈ ಸಾಧನೆ ಮಾಡಿದ್ದು, ಇದು 2008ರಲ್ಲಿ ಐಐಟಿ ಹೈದರಾಬಾದ್ ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗಿನ ಅತಿ ದೊಡ್ಡ ಪ್ಲೇಸ್‌ಮೆಂಟ್ (Placement) ಆಗಿದೆ.
ಈ ಮಹಾನ್ ಸಾಧನೆಯ ಬೆನ್ನಲ್ಲೇ ಎಡ್ವರ್ಡ್ ಅವರು ಸಂಸ್ಥೆಯ ನಿರ್ದೇಶಕರಾದ ಪ್ರೊ. ಬಿ.ಎಸ್.ಮೂರ್ತಿ ಅವರನ್ನು ಭೇಟಿಯಾಗಿದ್ದಾರೆ. ಈ ಕುರಿತ ವಿಡಿಯೋವನ್ನು ಐಐಟಿ ಹೈದರಾಬಾದ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ನಿರ್ದೇಶಕರು ಎಡ್ವರ್ಡ್ ಅವರಿಗೆ ಹಸ್ತಲಾಘವ ನೀಡಿ, “ನೀನು ನಮ್ಮ ಸಂಸ್ಥೆಗೆ ಕೀರ್ತಿ ತಂದಿದ್ದೀಯಾ” ಎಂದು ಮನಸಾರೆ ಅಭಿನಂದಿಸಿದ್ದಾರೆ. ಎಡ್ವರ್ಡ್ ಕೂಡ ತಮ್ಮ ಯಶಸ್ಸಿಗೆ ಕಾರಣರಾದ ಉಪನ್ಯಾಸಕರು ಮತ್ತು ಐಐಟಿ ಶೈಕ್ಷಣಿಕ ವ್ಯವಸ್ಥೆಗೆ ಧನ್ಯವಾದ ಅರ್ಪಿಸಿದ್ದಾರೆ.
ನೆದರ್ಲ್ಯಾಂಡ್ಸ್ ಕಂಪನಿಯಲ್ಲಿ ಕೆಲಸ:
ಎಡ್ವರ್ಡ್ ಅವರು ನೆದರ್ಲ್ಯಾಂಡ್ಸ್ ಮೂಲದ ಟ್ರೇಡಿಂಗ್ ಕಂಪನಿ ‘ಆಪ್ಟಿವರ್’ (Optiver) ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಆಯ್ಕೆಯಾಗಿದ್ದು, ಬರುವ ಜುಲೈ ತಿಂಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳಲಿದ್ದಾರೆ. ವಿಶೇಷವೇನೆಂದರೆ, ಎಡ್ವರ್ಡ್ ಅವರು ಸಂದರ್ಶನ ಎದುರಿಸಿದ ಮೊದಲ ಮತ್ತು ಏಕೈಕ ಕಂಪನಿ ಇದಾಗಿದೆ! “ನಾನು ಇಷ್ಟೊಂದು ದೊಡ್ಡ ಮೊತ್ತದ ಪ್ಯಾಕೇಜ್ ನಿರೀಕ್ಷಿಸಿರಲಿಲ್ಲ. ಸಂದರ್ಶನದ ನಂತರ ಮೆಂಟರ್ ಬಂದು ಆಫರ್ ಬಗ್ಗೆ ಹೇಳಿದಾಗ ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದು ನನ್ನ ಪಾಲಿಗೆ ಮರೆಯಲಾಗದ ಕ್ಷಣ” ಎಂದು ಎಡ್ವರ್ಡ್ ಸಂತಸ ಹಂಚಿಕೊಂಡಿದ್ದಾರೆ.






