ಮುಂಡಗೋಡ(ಉತ್ತರಕನ್ನಡ): ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದ ಕುರಿಯೇ ಯಜಮಾನನ ಪ್ರಾಣಕ್ಕೆ ಕುತ್ತಾದ ವಿಚಿತ್ರ ಹಾಗೂ ದಾರುಣ ಘಟನೆ ಮುಂಡಗೋಡ ತಾಲೂಕಿನ ನ್ಯಾಸರ್ಗಿ ಗ್ರಾಮದಲ್ಲಿ ನಡೆದಿದೆ. ಕುರಿಗಳಿಗೆ ಮೇವು ತಿನ್ನಿಸುವಾಗ ಕುರಿ ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃ*ತಪಟ್ಟಿದ್ದಾರೆ. ಮೃತರನ್ನು ನ್ಯಾಸರ್ಗಿ ಗ್ರಾಮದ ಕೂಲಿ ಕಾರ್ಮಿಕ ಶೇಖಪ್ಪ ಯಲ್ಲಪ್ಪ ಹಸರಂಬಿ (53) ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಜನವರಿ 2ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಶೇಖಪ್ಪ ಅವರು ತಮ್ಮ ಮನೆಯಲ್ಲಿದ್ದ ಕುರಿಗಳಿಗೆ ಮೇವು ತಿನ್ನಿಸುತ್ತಿದ್ದರು. ಈ ವೇಳೆ ಕುರಿಯೊಂದು ಏಕಾಏಕಿ ಶೇಖಪ್ಪ ಅವರ ಹೊಟ್ಟೆಗೆ ಬಲವಾಗಿ ಗುದ್ದಿದೆ. ಏಟಿನ ರಭಸಕ್ಕೆ ಅವರು ಅಸ್ವಸ್ಥಗೊಂಡಿದ್ದರು.
ಆರಂಭದಲ್ಲಿ ನೋವು ತಾಳಿಕೊಂಡು ಇದ್ದರಾದರೂ, ಮರುದಿನ (ಜ.3) ನೋವು ಹೆಚ್ಚಾಗಿದ್ದರಿಂದ ಶಿಗ್ಗಾವಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜನವರಿ 5ರಂದು ರಾತ್ರಿ 10:10ಕ್ಕೆ ಶೇಖಪ್ಪ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಮೃತರ ಪುತ್ರ ನಾಗರಾಜ ಹಸರಂಬಿ (28) ನೀಡಿದ ದೂರಿನನ್ವಯ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಕಲಂ 194 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.






