ಬೆಂಗಳೂರು: ಬೀದಿನಾಯಿಗಳ ಹಾವಳಿ ಮತ್ತು ಅವುಗಳ ಮನಸ್ಥಿತಿ ಕುರಿತು ಸುಪ್ರೀಂಕೋರ್ಟ್(Supreme Court) ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ನಟಿ ರಮ್ಯಾ (Actress Ramya) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಪುರುಷರ ಮನಸ್ಥಿತಿಯನ್ನು ನಾಯಿಗಳಿಗೆ ಹೋಲಿಸಿರುವ ಅವರು, ಪುರುಷರನ್ನೂ ಜೈಲಿಗೆ ಹಾಕಿ ಎಂದು ವ್ಯಂಗ್ಯವಾಡಿದ್ದಾರೆ.
ಘಟನೆಯ ಹಿನ್ನೆಲೆ:
ಬೀದಿನಾಯಿಗಳ ಕುರಿತ ವಿಚಾರಣೆ ವೇಳೆ ನ್ಯಾಯಾಲಯವು, “ಬೀದಿನಾಯಿಗಳ ಮನಸ್ಥಿತಿ ಯಾವಾಗ ಹೇಗಿರುತ್ತದೆಯೋ ಹೇಳಲು ಸಾಧ್ಯವಿಲ್ಲ. ಅವು ಯಾವಾಗ ಕಚ್ಚುತ್ತವೆ ಅಥವಾ ಯಾವಾಗ ಸುಮ್ಮನಿರುತ್ತವೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ” ಎಂದು ಅಭಿಪ್ರಾಯ ಪಟ್ಟಿತ್ತು.
ಸುಪ್ರೀಂಕೋರ್ಟ್ ಹೇಳಿಕೆಯನ್ನು ಟೀಕಿಸಿರುವ ರಮ್ಯಾ, ನಾಯಿಗಳಂತೆಯೇ ಪುರುಷರ ಮನಸ್ಸನ್ನು ಕೂಡ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಪುರುಷನು ಯಾವಾಗ ಅತ್ಯಾಚಾರ (Rape) ಮಾಡುತ್ತಾನೋ ಅಥವಾ ಯಾವಾಗ ಕೊಲೆ ಮಾಡುತ್ತಾನೋ ಯಾರಿಗೂ ಗೊತ್ತಿಲ್ಲ. ಆತನ ಮನಸ್ಥಿತಿಯೂ ಅಷ್ಟೇ ಅನಿಶ್ಚಿತವಾಗಿದೆ ಎಂದು ರಮ್ಯಾ ಕಿಡಿಕಾರಿದ್ದಾರೆ.
ನಾಯಿಗಳ ಮನಸ್ಥಿತಿ ಅರ್ಥವಾಗಲ್ಲ ಎಂಬ ಕಾರಣಕ್ಕೆ ಅವುಗಳ ಮೇಲೆ ಕ್ರಮ ಕೈಗೊಳ್ಳುವುದಾದರೆ, ಎಲ್ಲಾ ಪುರುಷರನ್ನೂ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ಜೈಲಿಗೆ ಹಾಕಿ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.






