ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ನಡೆ ಇಟ್ಟಿದ್ದು, ನಿರ್ಬಂಧಕ್ಕೊಳಗಾಗಿದ್ದ ವೆನೆಜುವೆಲಾದ ಸುಮಾರು 30 ರಿಂದ 50 ಮಿಲಿಯನ್ ಬ್ಯಾರೆಲ್ ತೈಲವನ್ನು (Oil) ಅಮೆರಿಕಕ್ಕೆ ಹಸ್ತಾಂತರಿಸಲಾಗುವುದು ಎಂದು ಘೋಷಿಸಿದ್ದಾರೆ. ಈ ತೀರ್ಮಾನದ ಮೂಲಕ ತೈಲಕ್ಕಾಗಿ ವೆನೆಜುವೆಲಾವನ್ನು ಅವಲಂಬಿಸಿದ್ದ ಚೀನಾಕ್ಕೆ ಪರೋಕ್ಷವಾಗಿ ಹೊಡೆತ ನೀಡಿದ್ದಾರೆ.
ಈ ಕುರಿತು ತಮ್ಮ ‘ಟ್ರೂತ್ ಸೋಷಿಯಲ್’ (Truth Social) ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ಈ ತೈಲವನ್ನು ಹಡಗುಗಳಿಂದ ನೇರವಾಗಿ ಅಮೆರಿಕದ ಬಂದರುಗಳಿಗೆ ರವಾನಿಸಲಾಗುವುದು. ಇದನ್ನು ಮಾರುಕಟ್ಟೆ ಬೆಲೆಯಲ್ಲಿ ಮಾರಾಟ ಮಾಡಿ, ಆ ಹಣದ ಸಂಪೂರ್ಣ ನಿಯಂತ್ರಣವನ್ನು ಅಮೆರಿಕದ ಅಧ್ಯಕ್ಷನಾಗಿ ನಾನೇ ನಿರ್ವಹಿಸುತ್ತೇನೆ. ಈ ಹಣವನ್ನು ವೆನೆಜುವೆಲಾ ಮತ್ತು ಅಮೆರಿಕದ ಜನರ ಒಳಿತಿಗಾಗಿ ಬಳಸಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
ಚೀನಾಗೆ ಹೋಗಬೇಕಿದ್ದ ತೈಲ ಅಮೆರಿಕಕ್ಕೆ!: ವರದಿಗಳ ಪ್ರಕಾರ, ಸುಮಾರು 2 ಬಿಲಿಯನ್ ಡಾಲರ್ ಮೌಲ್ಯದ ಕಚ್ಚಾ ತೈಲವನ್ನು ಕ್ಯಾರಕಾಸ್‌ನಿಂದ ವಾಷಿಂಗ್ಟನ್‌ಗೆ ರಫ್ತು ಮಾಡುವ ಒಪ್ಪಂದ ಏರ್ಪಟ್ಟಿದೆ. ಇದು ಜಾಗತಿಕ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಚೀನಾಗೆ ಹೋಗಬೇಕಿದ್ದ ತೈಲ ಪೂರೈಕೆಯನ್ನು ಅಮೆರಿಕದತ್ತ ತಿರುಗಿಸುವ ತಂತ್ರಗಾರಿಕೆ ಇದಾಗಿದೆ.
ಮಡುರೊ ಬಂಧನದ ಬಳಿಕ ಬದಲಾದ ಚಿತ್ರಣ: ಕಳೆದ ಡಿಸೆಂಬರ್ ಮಧ್ಯಭಾಗದಿಂದ ಟ್ರಂಪ್ ಹೇರಿದ್ದ ರಫ್ತು ತಡೆಯಿಂದಾಗಿ (Blockade) ವೆನೆಜುವೆಲಾದಲ್ಲಿ ಲಕ್ಷಾಂತರ ಬ್ಯಾರೆಲ್ ತೈಲ ಟ್ಯಾಂಕರ್‌ಗಳಲ್ಲಿ ಹಾಗೂ ಸಂಗ್ರಹಾಗಾರಗಳಲ್ಲಿ ಸಿಲುಕಿಕೊಂಡಿತ್ತು. ಜನವರಿ 3ರಂದು ಅಮೆರಿಕ ಪಡೆಗಳು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದ ನಂತರ ಈ ಮಹತ್ವದ ಬೆಳವಣಿಗೆ ನಡೆದಿದೆ. ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೋಡ್ರಿಗಸ್ ಅವರಿಗೆ ಅಮೆರಿಕ ಮತ್ತು ಖಾಸಗಿ ಕಂಪನಿಗಳಿಗೆ ವೆನೆಜುವೆಲಾ ತೈಲ ಉದ್ಯಮದಲ್ಲಿ ‘ಸಂಪೂರ್ಣ ಪ್ರವೇಶ’ (Total Access) ನೀಡುವಂತೆ ಟ್ರಂಪ್ ಸೂಚಿಸಿದ್ದಾರೆ.
ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆ?: ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ಆಂತರಿಕ ಕಾರ್ಯದರ್ಶಿ ಡಗ್ ಬರ್ಗಮ್, “ವೆನೆಜುವೆಲಾದಿಂದ ತೈಲ ಹರಿವು ಹೆಚ್ಚಾಗುವುದು ಅಮೆರಿಕದ ಪೆಟ್ರೋಲ್ ಬೆಲೆ ಇಳಿಕೆ ಮತ್ತು ಉದ್ಯೋಗ ಭದ್ರತೆಗೆ ಸಿಹಿ ಸುದ್ದಿಯಾಗಿದೆ. ಅಮೆರಿಕದ ತಂತ್ರಜ್ಞಾನ ಮತ್ತು ಪಾಲುದಾರಿಕೆಯೊಂದಿಗೆ ವೆನೆಜುವೆಲಾ ತನ್ನ ಆರ್ಥಿಕತೆಯನ್ನು ಮರುಕಟ್ಟಿಕೊಳ್ಳಲು ಇದೊಂದು ಸುವರ್ಣಾವಕಾಶ” ಎಂದು ಫಾಕ್ಸ್ ನ್ಯೂಸ್‌ಗೆ ತಿಳಿಸಿದ್ದಾರೆ.






