ಕೊಚ್ಚಿನ್: ರಸ್ತೆ ಅಪಘಾತದಲ್ಲಿ ಮೃತಪಟ್ಟ ಭಿಕ್ಷುಕನೊಬ್ಬನ ಬಳಿ ಬರೋಬ್ಬರಿ 4.5 ಲಕ್ಷ ರೂಪಾಯಿಗೂ ಹೆಚ್ಚು ನಗದು ಪತ್ತೆಯಾಗಿರುವ ಘಟನೆ ಕೇರಳದ ಆಲಪ್ಪುಳದಲ್ಲಿ ನಡೆದಿದ್ದು, ಸ್ಥಳೀಯರು ಮತ್ತು ಪೊಲೀಸರು ಹುಬ್ಬೇರಿಸುವಂತಾಗಿದೆ. ಚಾರುಮ್ಮೂಟ್ ಮತ್ತು ಆಲಪ್ಪುಳದ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರಪರಿಚಿತನಾಗಿದ್ದ ವ್ಯಕ್ತಿಯೊಬ್ಬನ ಬಳಿ ಇಷ್ಟೊಂದು ಪ್ರಮಾಣದ ಹಣ ಸಿಕ್ಕಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸೋಮವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಈ ವ್ಯಕ್ತಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯ ದಾಖಲೆಗಳ ಪ್ರಕಾರ, ವ್ಯಕ್ತಿ ತನ್ನ ಹೆಸರನ್ನು ಅನಿಲ್ ಕಿಶೋರ್ ಎಂದು ಹೇಳಿಕೊಂಡಿದ್ದ. ಆದರೆ, ಚಿಕಿತ್ಸೆ ನಡೆಯುತ್ತಿರುವಾಗಲೇ ಯಾರಿಗೂ ಮಾಹಿತಿ ನೀಡದೆ ಆಸ್ಪತ್ರೆಯಿಂದ ಹೊರಟುಹೋಗಿದ್ದ ಈತ, ಮಂಗಳವಾರ ಬೆಳಿಗ್ಗೆ ಅಂಗಡಿಯೊಂದರ ಹೊರಗೆ ಶವವಾಗಿ ಪತ್ತೆಯಾಗಿದ್ದಾನೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಮೃತದೇಹದ ಬಳಿಯಿದ್ದ ಬ್ಯಾಗ್ (ಕಂಟೇನರ್) ಅನ್ನು ವಶಕ್ಕೆ ಪಡೆದಿದ್ದರು.
ಪ್ಲಾಸ್ಟಿಕ್ ಟಿನ್ ತುಂಬ ಹಣ: ಸ್ಥಳೀಯ ಪಂಚಾಯತ್ ಸದಸ್ಯ ಫಿಲಿಪ್ ಉಮ್ಮನ್ ಅವರ ಸಮ್ಮುಖದಲ್ಲಿ ಪೊಲೀಸರು ಆ ವ್ಯಕ್ತಿಯ ಬ್ಯಾಗ್ ಮತ್ತು ಪಾತ್ರೆಗಳನ್ನು ತೆರೆದು ನೋಡಿದಾಗ ದಂಗಾಗಿದ್ದಾರೆ. ಪ್ಲಾಸ್ಟಿಕ್ ಟಿನ್‌ಗಳ ಒಳಗೆ ಬಚ್ಚಿಟ್ಟಿದ್ದ ಸ್ಥಿತಿಯಲ್ಲಿ ನೋಟಿನ ಕಂತೆಗಳು ಪತ್ತೆಯಾಗಿವೆ. ಎಣಿಕೆ ಮಾಡಿದಾಗ ಒಟ್ಟು 4.5 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತದ ಹಣವಿರುವುದು ಕಂಡುಬಂದಿದೆ. ವಿಶೇಷವೆಂದರೆ, ಇದರಲ್ಲಿ ಚಲಾವಣೆಯಲ್ಲಿಲ್ಲದ ನಿಷೇಧಿತ ನೋಟುಗಳು ಮತ್ತು ಕೆಲವು ವಿದೇಶಿ ಕರೆನ್ಸಿಗಳೂ ಸೇರಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ಅನಿಲ್ ಕಿಶೋರ್ ಪ್ರತಿದಿನ ಊಟಕ್ಕಾಗಿ ಭಿಕ್ಷೆ ಬೇಡುತ್ತಿದ್ದರು. ಆದರೆ ಅವರ ಬಳಿ ಇಷ್ಟೊಂದು ದೊಡ್ಡ ಮೊತ್ತದ ಹಣವಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಈ ಘಟನೆ ನಮಗೆಲ್ಲ ಆಘಾತ ತಂದಿದೆ” ಎಂದು ಪಂಚಾಯತ್ ಸದಸ್ಯ ಉಮ್ಮನ್ ತಿಳಿಸಿದ್ದಾರೆ. ಮೃತನ ಕುಟುಂಬಸ್ಥರು ಬಂದರೆ ಹಣವನ್ನು ಹಸ್ತಾಂತರಿಸಲಾಗುವುದು, ಇಲ್ಲದಿದ್ದರೆ ಕಾನೂನು ಪ್ರಕಾರ ಹಣವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.






