ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ತೆರವುಗೊಳಿಸಿದ ನಂತರ, ಇದೀಗ ನಿರಾಶ್ರಿತರ ಪೈಕಿ ಅರ್ಹರಿಗೆ ಸೂರು ಕಲ್ಪಿಸುವ ಕುರಿತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಹತ್ವದ ಮಾಹಿತಿ ನೀಡಿದ್ದಾರೆ. ತೆರವು ಕಾರ್ಯಾಚರಣೆಗೆ ಒಳಗಾದ 161 ಕುಟುಂಬಗಳ ಪೈಕಿ, ದಾಖಲೆಗಳು ಸರಿಯಿರುವ 26 ಕುಟುಂಬಗಳಿಗೆ ಮಾತ್ರ ಸರ್ಕಾರಿ ವಸತಿ ಕಲ್ಪಿಸಲು ಅವಕಾಶವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಭೆ ನಡೆಸಿ ಚರ್ಚಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಜಮೀರ್, “ಒಟ್ಟು 161 ಮನೆಗಳನ್ನು ತೆರವುಗೊಳಿಸಲಾಗಿತ್ತು. ಈ ಪೈಕಿ ನಡೆಸಲಾದ ಪರಿಶೀಲನೆಯಲ್ಲಿ ಕೇವಲ 26 ನಿವಾಸಿಗಳ ದಾಖಲೆಗಳು ಮಾತ್ರ ಸಮರ್ಪಕವಾಗಿವೆ. ಉಳಿದವರ ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದೆ. ಹೊರಗಿನವರಿಗೆ ಯಾವುದೇ ಕಾರಣಕ್ಕೂ ಮನೆ ನೀಡುವುದಿಲ್ಲ. ಸೂಕ್ತ ದಾಖಲೆ ಹೊಂದಿರುವ ಈ 26 ಕುಟುಂಬಗಳಿಗೆ ತಕ್ಷಣವೇ ಮನೆ ಹಂಚಿಕೆ ಮಾಡಲು ಮುಖ್ಯಮಂತ್ರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಈ ಬಗ್ಗೆ ಸಂಪುಟದಲ್ಲಿ ಚರ್ಚಿಸುವ ಅಗತ್ಯವಿಲ್ಲ,” ಎಂದು ತಿಳಿಸಿದರು.
ಮನೆ ಹಂಚಿಕೆಗೆ ಮಾನದಂಡಗಳೇನು? ಮನೆ ಪಡೆಯಲು ಫಲಾನುಭವಿಗಳು ಕೆಲವೊಂದು ಮಾನದಂಡಗಳನ್ನು ಪೂರೈಸುವುದು ಕಡ್ಡಾಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ:
- ಫಲಾನುಭವಿಗಳು ಕರ್ನಾಟಕದ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿರಬೇಕು.
- ಕೋಗಿಲು ಲೇಔಟ್‌ನಲ್ಲಿ ಕನಿಷ್ಠ ಕಳೆದ ಐದು ವರ್ಷಗಳಿಂದ ವಾಸವಿದ್ದಿರಬೇಕು.
- ಮಾತೃಭಾಷೆ ಬೇರೆಯಾಗಿದ್ದರೂ ಅವರು ಕರ್ನಾಟಕದವರೇ ಆಗಿರಬೇಕು.
- ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದ್ದರೆ ರೇಷನ್ ಕಾರ್ಡ್ ಅನ್ನು ಮಾನದಂಡವಾಗಿ ಪರಿಗಣಿಸಲಾಗುತ್ತದೆ.
- ಅರ್ಹತೆಯನ್ನು ನಿರ್ಧರಿಸಲು ವೋಟರ್ ಐಡಿ, ರೇಷನ್ ಕಾರ್ಡ್ ಮತ್ತು ಮಕ್ಕಳ ಶಾಲಾ ದಾಖಲಾತಿಗಳನ್ನು ಪರಿಗಣಿಸಲಾಗುವುದು.






