ಪುಣೆ: ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಐತಿಹಾಸಿಕ ವರದಿ ನೀಡುವ ಮೂಲಕ ದೇಶದ ಪರಿಸರ ಕಾಳಜಿಗೆ ಹೊಸ ದಿಕ್ಕು ತೋರಿಸಿದ್ದ ಖ್ಯಾತ ಪರಿಸರ ವಿಜ್ಞಾನಿ, ಪರಿಸರವಾದಿ ಡಾ. ಮಾಧವ ಗಾಡ್ಗೀಳ್ (83) ಅವರು ಬುಧವಾರ ರಾತ್ರಿ ಪುಣೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರ ಅಗಲಿಕೆ ಭಾರತದ ಪರಿಸರ ಮತ್ತು ವಿಜ್ಞಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಗಾಡ್ಗೀಳ್ ವರದಿ ಎಂಬ ಮೈಲಿಗಲ್ಲು:
2010ರಲ್ಲಿ ಕೇಂದ್ರ ಸರ್ಕಾರ ರಚಿಸಿದ್ದ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿಯ (WGEEP) ಮುಖ್ಯಸ್ಥರಾಗಿದ್ದ ಡಾ. ಗಾಡ್ಗೀಳ್, ಪಶ್ಚಿಮ ಘಟ್ಟಗಳ ಉಳಿವಿಗೆ ಕಠಿಣ ಶಿಫಾರಸುಗಳನ್ನು ಮಾಡಿದ್ದರು. ಅವರು ಸಲ್ಲಿಸಿದ ವರದಿಯು ‘ಗಾಡ್ಗೀಳ್ ಆಯೋಗದ ವರದಿ’ ಎಂದೇ ಪ್ರಸಿದ್ಧವಾಗಿದ್ದು, ಪರಿಸರ ಸಂರಕ್ಷಣೆಯ ಇತಿಹಾಸದಲ್ಲಿ ಇದು ಮಹತ್ವದ ದಾಖಲೆಯಾಗಿದೆ. ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಸೇರಿದಂತೆ ಹಲವು ಉನ್ನತ ಹುದ್ದೆಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದರು.
ಬೆಂಗಳೂರಿನ ನಂಟು:
1942ರಲ್ಲಿ ಪುಣೆಯಲ್ಲಿ ಜನಿಸಿದ ಗಾಡ್ಗೀಳ್, ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು. 1973ರಲ್ಲಿ ಬೆಂಗಳೂರಿಗೆ ಆಗಮಿಸಿದ ಅವರು, ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ಬರೋಬ್ಬರಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2004ರಲ್ಲಿ ಅಲ್ಲಿನ ಪರಿಸರ ವಿಜ್ಞಾನ ಕೇಂದ್ರದ ಅಧ್ಯಕ್ಷರಾಗಿ ನಿವೃತ್ತರಾಗಿದ್ದರು.
ಕೇವಲ ವಿಜ್ಞಾನಿಯಷ್ಟೇ ಅಲ್ಲದೆ, 1960ರ ದಶಕದಲ್ಲಿ ಅವರು ಮಹಾರಾಷ್ಟ್ರ ರಾಜ್ಯಮಟ್ಟದ ಹೈಜಂಪ್ (High Jump) ಚಾಂಪಿಯನ್ ಆಗಿ ದಾಖಲೆ ಬರೆದಿದ್ದ ಅಪ್ರತಿಮ ಕ್ರೀಡಾಪಟುವೂ ಆಗಿದ್ದರು ಎಂಬುದು ವಿಶೇಷ.






