ಹೊನ್ನಾವರ(ಉತ್ತರಕನ್ನಡ): ಈ ಬಾರಿ ನಿರೀಕ್ಷೆಗಿಂತ ಮುಂಚಿತವಾಗಿಯೇ ಮಲೆನಾಡಿನಲ್ಲಿ ಜೀವ ಹಿಂಡುವ ಮಂಗನ ಕಾಯಿಲೆ (KFD) ಕಾಣಿಸಿಕೊಂಡಿದ್ದು, ಜನರ ನಿದ್ದೆಗೆಡಿಸಿದೆ. ಹೊನ್ನಾವರ ತಾಲೂಕಿನ ಸಾಲ್ಕೋಡಿನ ಯುವಕನೊಬ್ಬನಿಗೆ ಸೋಂಕು ದೃಢಪಟ್ಟಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರ ಜೊತೆಗೆ ಸಿದ್ದಾಪುರ ತಾಲೂಕಿನ ಹೇರೂರಿನ 80 ವರ್ಷದ ವೃದ್ಧೆಯೊಬ್ಬರಿಗೂ ಸೋಂಕು ತಗುಲಿದ್ದು, ಶಿರಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಆರೋಗ್ಯ ಸಚಿವರು ಮಂಗನ ಕಾಯಿಲೆಗೆ ಲಸಿಕೆ ಸಿದ್ಧಪಡಿಸುವ ಭರವಸೆ ನೀಡಿದ್ದರು. ಆದರೆ, ಈ ವರ್ಷವೂ ಲಸಿಕೆ ಸಿದ್ಧವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಇನ್ನು ಎರಡು ವರ್ಷಗಳ ಕಾಲಾವಕಾಶ ಬೇಕಾಗಬಹುದು ಎನ್ನಲಾಗುತ್ತಿದೆ. ಕಳೆದ 35-40 ವರ್ಷಗಳಿಂದ ಮಲೆನಾಡನ್ನು ಕಾಡುತ್ತಿರುವ ಈ ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದು ವಿಪರ್ಯಾಸ. ಪ್ರತಿ ವರ್ಷ ಸಾವಿರಾರು ಜನರು ನರಳಾಡುವಂತಾಗಿದ್ದು, ನೂರಾರು ಸಾವುಗಳು ಸಂಭವಿಸುತ್ತಿದ್ದರೂ, ಸರ್ಕಾರ ಇದನ್ನು ತಡೆಯಲು ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಡಿಸೆಂಬರ್ ತಿಂಗಳಿನಲ್ಲಿ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 12 ಜನರಿಗೆ ಸೋಂಕು ತಗುಲಿತ್ತು. ಇದೀಗ ಉತ್ತರ ಕನ್ನಡದ ಇಬ್ಬರು ರೋಗಿಗಳು ಸೇರಿ ಒಟ್ಟು 14 ಜನರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದ್ದು, ರೋಗ ವ್ಯಾಪಕ ಪ್ರದೇಶದಲ್ಲಿ ಹರಡುತ್ತಿದೆ. ಮಳೆಗಾಲ ಆರಂಭವಾಗುವರೆಗೂ, ಅಂದರೆ ಇನ್ನು 5 ತಿಂಗಳುಗಳ ಕಾಲ ಈ ಕಾಯಿಲೆಯ ಭೀತಿ ಮಲೆನಾಡಿನಲ್ಲಿ ಇರಲಿದೆ.
ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಉಣ್ಣೆ ಕಚ್ಚದಂತೆ ಮೈಗೆ ಹಚ್ಚುವ ತೈಲ (DMP oil) ವಿತರಿಸಿದೆ ಮತ್ತು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದೆ. “ಶೇ. 90 ರಷ್ಟು ಜನ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವುದರಿಂದ ಮತ್ತು ನಿರ್ದಿಷ್ಟ ಔಷಧ ಇಲ್ಲದಿರುವುದರಿಂದ, ಸಾರ್ವಜನಿಕರು ಹೆಚ್ಚು ಎಚ್ಚರ ವಹಿಸಿ ಸರ್ಕಾರದ ಕ್ರಮಗಳಿಗೆ ಸಹಕರಿಸಬೇಕು” ಎಂದು ಜಿಲ್ಲಾ ಮಂಗನ ಕಾಯಿಲೆ ವೈದ್ಯಾಧಿಕಾರಿ ಡಾ. ಸತೀಶ ಶೇಟ್ ಮನವಿ ಮಾಡಿದ್ದಾರೆ.
ಇಲ್ಲಿಯವರೆಗೆ ರೋಗ ಪತ್ತೆಹಚ್ಚಲು ಶಿವಮೊಗ್ಗದಲ್ಲಿ ಮಾತ್ರ ಪ್ರಯೋಗಾಲಯವಿತ್ತು. ಈ ವರ್ಷ ಶಿರಸಿಗೆ ಪ್ರಯೋಗಾಲಯ ಮಂಜೂರಾಗಿದ್ದರೂ, ಇನ್ನೂ ಕಾರ್ಯಾರಂಭ ಮಾಡಬೇಕಿದೆ. ಸೋಂಕಿತರಿಗೆ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹಾಗೂ ಗಂಭೀರ ಸ್ಥಿತಿಯಲ್ಲಿರುವವರಿಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ಆದಷ್ಟು ಬೇಗ ಪರಿಣಾಮಕಾರಿ ಲಸಿಕೆ ಮತ್ತು ಔಷಧ ಒದಗಿಸಬೇಕು ಎಂಬುದು ಮಲೆನಾಡಿಗರ ಒತ್ತಾಯವಾಗಿದೆ.






