ಅಮೆರಿಕಾ: ಲಕ್ಷಾಂತರ ಜನರ ಪ್ರಾಣ ತೆಗೆಯಬಲ್ಲಷ್ಟು ಭಾರೀ ಪ್ರಮಾಣದ ಮಾರಕ ಕೊಕೇನ್ (Cocaine) ಸಾಗಾಟ ಮಾಡುತ್ತಿದ್ದ ಇಬ್ಬರು ಭಾರತೀಯ ಮೂಲದ ಟ್ರಕ್ ಚಾಲಕರನ್ನು ಅಮೆರಿಕದ ಇಂಡಿಯಾನ ಪೊಲೀಸರು ಬಂಧಿಸಿದ್ದಾರೆ. ವಾಡಿಕೆಯ ತಪಾಸಣೆ ವೇಳೆ ಟ್ರಕ್‌ನ ಸ್ಲೀಪರ್ ಬರ್ತ್‌ನಲ್ಲಿ ಬಚ್ಚಿಟ್ಟಿದ್ದ ಬರೋಬ್ಬರಿ 309 ಪೌಂಡ್ (ಸುಮಾರು 140 ಕೆ.ಜಿ) ಕೊಕೇನ್ ಪತ್ತೆಯಾಗಿದೆ.
ಬಂಧಿತರನ್ನು ಗುರ್‌ಪ್ರೀತ್ ಸಿಂಗ್ (25) ಮತ್ತು ಜಸ್ವೀರ್ ಸಿಂಗ್ (30) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದರು ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ (DHS) ಅಧಿಕಾರಿಗಳು ತಿಳಿಸಿದ್ದಾರೆ. ಗುರ್‌ಪ್ರೀತ್ 2023ರಲ್ಲಿ ಮತ್ತು ಜಸ್ವೀರ್ 2017ರಲ್ಲಿ ಅಮೆರಿಕಕ್ಕೆ ನುಸುಳಿದ್ದರು. ಆದರೂ ಇವರಿಬ್ಬರೂ ಕ್ಯಾಲಿಫೋರ್ನಿಯಾ ರಾಜ್ಯದಿಂದ ಕಮರ್ಷಿಯಲ್ ಡ್ರೈವಿಂಗ್ ಲೈಸೆನ್ಸ್ ಪಡೆದು ಟ್ರಕ್ ಓಡಿಸುತ್ತಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.
“ಕೇವಲ 1.2 ಗ್ರಾಂ ಕೊಕೇನ್ ಮನುಷ್ಯನ ಸಾವಿಗೆ ಕಾರಣವಾಗಬಲ್ಲದು. ಆದರೆ ಈ ಇಬ್ಬರು ಸಾಗಿಸುತ್ತಿದ್ದ 309 ಪೌಂಡ್ ಕೊಕೇನ್, ಸುಮಾರು 1,13,000 ಅಮೆರಿಕನ್ನರನ್ನು ಕೊಲ್ಲಲು ಸಾಕಾಗುವಷ್ಟಿತ್ತು” ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅಕ್ರಮ ವಲಸಿಗರಿಗೆ ಚಾಲನಾ ಪರವಾನಗಿ ನೀಡುತ್ತಿರುವ ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್ ಅವರ ನೀತಿಗಳನ್ನು ಅಧಿಕಾರಿಗಳು ಇದೇ ವೇಳೆ ತೀವ್ರವಾಗಿ ಖಂಡಿಸಿದ್ದಾರೆ.






