Home State Politics National More
STATE NEWS

ACF ಮದನ ನಾಯಕ್ ಹ*ತ್ಯೆ ಕೇಸ್: 13 ವರ್ಷಗಳ ಬಳಿಕ ಆರೋಪಿಗೆ 10 ವರ್ಷ ಜೈಲು

Acf madan nayak murder case judgment accused gets
Posted By: Sagaradventure
Updated on: Jan 9, 2026 | 5:30 PM

ದಾಂಡೇಲಿ(ಉತ್ತರಕನ್ನಡ): ಕರ್ತವ್ಯದ ಮೇಲಿದ್ದಾಗಲೇ ಅರಣ್ಯಾಧಿಕಾರಿ ಮೇಲೆ ಹಲ್ಲೆ ನಡೆಸಿ ಹ*ತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬರೋಬ್ಬರಿ 13 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಎಸಿಎಫ್ ಮದನ ನಾಯಕ್ ಅವರನ್ನು ಕಲ್ಲಿನಿಂದ ಹೊಡೆದು ಸಾ*ಯಿಸಿದ ಪ್ರಮುಖ ಆರೋಪಿ ಪ್ರಶಾಂತ ಲಮಾಣಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 11 ಸಾವಿರ ರೂಪಾಯಿ ದಂಡ ವಿಧಿಸಿ ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಯಲ್ಲಾಪುರ ಪೀಠ) ನ್ಯಾಯಾಧೀಶರಾದ ಕಿರಣ ಕಿಣಿ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಘಟನೆಯ ಹಿನ್ನೆಲೆ:
2012ರಲ್ಲಿ ದಾಂಡೇಲಿಯಲ್ಲಿ ಎಸಿಎಫ್ ಆಗಿದ್ದ ಮದನ ನಾಯಕ್ ಅವರು ಕುಟುಂಬ ಸಮೇತ ಕೇರವಾಡದ ದಾಂಡೇಲಪ್ಪ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಕಾಳಿ ನದಿಯಲ್ಲಿದ್ದ ಮೊಸಳೆಗಳಿಗೆ ಪ್ರವಾಸಿಗರು ಮಾಂಸ ಎಸೆಯುತ್ತಿದ್ದರು. ಇದನ್ನು ಕಂಡ ಮದನ ನಾಯಕ್ ಅವರು ವನ್ಯಜೀವಿಗಳಿಗೆ ತೊಂದರೆ ಕೊಡದಂತೆ ಪ್ರವಾಸಿಗರನ್ನು ತಡೆದಿದ್ದರು. ಇದರಿಂದ ಕೆರಳಿದ ಗುಂಪು ಅಧಿಕಾರಿ ಹಾಗೂ ಅವರ ಕುಟುಂಬದ ಮೇಲೆ ಮಾ*ರಣಾಂತಿಕ ದಾಳಿ ನಡೆಸಿತ್ತು. ಹಲ್ಲೆಕೋರರ ಬೆದರಿಕೆಗೆ ಹೆದರಿ ಆರಂಭದಲ್ಲಿ ತಾವು ಶೌಚಾಲಯದಲ್ಲಿ ಬಿದ್ದು ಗಾಯಗೊಂಡಿದ್ದಾಗಿ ಮದನ ನಾಯಕ್ ಹೇಳಿಕೆ ನೀಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃ*ತಪಟ್ಟಿದ್ದರು.

ಜರ್ಮನಿಯಿಂದ ಮಗಳ ಸಾಕ್ಷಿ:
ಈ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸಿತ್ತು. ಡಿವೈಎಸ್ಪಿ ಬಿ.ಬಿ. ಅಶೋಕಕುಮಾರ ಅವರು ತನಿಖಾಧಿಕಾರಿಯಾಗಿದ್ದರು. ವಿಶೇಷವೆಂದರೆ, ಮದನ ನಾಯಕ್ ಅವರ ಪುತ್ರಿ ಮೇಘಾ ನಾಯಕ ಅವರು ಜರ್ಮನಿಯಲ್ಲಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ನೀಡಿದ ಸಾಕ್ಷ್ಯ ಪ್ರಕರಣದಲ್ಲಿ ನಿರ್ಣಾಯಕವಾಯಿತು. ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರ ಪ್ರಬಲ ವಾದವನ್ನು ಆಲಿಸಿದ ನ್ಯಾಯಾಲಯ, ಕಲ್ಲು ತೂರಾಟ ನಡೆಸಿದ ಪ್ರಶಾಂತ ಲಮಾಣಿಗೆ ಶಿಕ್ಷೆ ವಿಧಿಸಿದ್ದಲ್ಲದೆ, ಸಂತ್ರಸ್ತ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದೆ. ಕಲ್ಲಿನಿಂದ ಹೊಡೆದ ಮತ್ತೋರ್ವ ಆರೋಪಿ ಈಗಾಗಲೇ ಮೃ*ತಪಟ್ಟಿದ್ದಾನೆ. ಉಳಿದ ಆರೋಪಿಗಳಿಗೆ ತಲಾ 1 ಸಾವಿರ ದಂಡ ವಿಧಿಸಲಾಗಿದೆ.

ನ್ಯಾಯಾಲಯದ ಆವರಣದಲ್ಲಿ ಮದನ ನಾಯಕ್ ಪತ್ನಿ ಸುಮತಿ ಹಾಗೂ ಪುತ್ರ ಶಿಶಿರ ನಾಯಕ್ ಭಾವುಕರಾದರು. ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರಿ ಅಭಿಯೋಜಕರನ್ನು ಸನ್ಮಾನಿಸಿದರು. “ಅರಣ್ಯಾಧಿಕಾರಿಗಳು ಸವಾಲುಗಳನ್ನು ಮೆಟ್ಟಿ ನಿಂತು ಕೆಲಸ ಮಾಡಬೇಕು” ಎಂದು ವಕೀಲ ರಾಜೇಶ ಮಳಗಿಕರ್ ಸಲಹೆ ನೀಡಿದರು.

Shorts Shorts