ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ (Sujata Handi) ಅವರ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಮತ್ತು ವಿವಸ್ತ್ರ ಪ್ರಕರಣದ ತನಿಖೆ ಚುರುಕುಗೊಂಡ ಬೆನ್ನಲ್ಲೇ, ಆಕೆಯ ಹಳೆಯ ಕರಾಳ ಇತಿಹಾಸವೊಂದು ಮುನ್ನೆಲೆಗೆ ಬಂದಿದೆ. ಮೂರು ವರ್ಷಗಳ ಹಳೆಯದ್ದು ಎನ್ನಲಾದ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ವೈರಲ್ ವಿಡಿಯೋದಲ್ಲಿ ಸುಜಾತಾ ಹಂಡಿ ಕೈಯಲ್ಲಿ ದೊಡ್ಡ ಮಚ್ಚು ಹಿಡಿದು, ನೈಲಾನ್ ಹಗ್ಗದಿಂದ ವ್ಯಕ್ತಿಯೊಬ್ಬನಿಗೆ ಮೃಗೀಯವಾಗಿ ಥಳಿಸುತ್ತಿರುವುದು ಕಂಡುಬಂದಿದೆ. ಆ ವ್ಯಕ್ತಿ “ಅಕ್ಕ, ಅಮ್ಮಾ” ಎಂದು ಕಾಲು ಹಿಡಿದು ಬೇಡಿಕೊಂಡರೂ ಬಿಡದೆ ಕ್ರೂರವಾಗಿ ವರ್ತಿಸಿರುವುದು ಕಂಡುಬಂದಿದೆ.
ಮಾಹಿತಿ ಪ್ರಕಾರ, ಧಾರವಾಡದ ತೂಕಾರಾಮ್ ಎಂಬ ವ್ಯಕ್ತಿಯನ್ನು ಹನಿಟ್ರ್ಯಾಪ್ (Honeytrap) ಮಾಡಿ ರೂಮ್‌ನಲ್ಲಿ ಕೂಡಿಹಾಕಿದ್ದ ಸುಜಾತಾ ಮತ್ತು ಆಕೆಯ ಗ್ಯಾಂಗ್, ಬರೋಬ್ಬರಿ 4 ದಿನಗಳ ಕಾಲ ಚಿತ್ರಹಿಂಸೆ ನೀಡಿತ್ತು. ಹಲ್ಲೆಯ ಮೂಲಕ ಆ ವ್ಯಕ್ತಿಯಿಂದ 1.84 ಲಕ್ಷ ರೂಪಾಯಿ ವಸೂಲಿ ಮಾಡಿದ ಆರೋಪದಡಿ 2023ರ ನವೆಂಬರ್‌ನಲ್ಲಿ ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸುಜಾತಾ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿದ್ದಳು.
ಒಂದು ಕಡೆ ಇವತ್ತು ಬಿಜೆಪಿ ನಾಯಕರು ಹುಬ್ಬಳ್ಳಿಯಲ್ಲಿ ಸುಜಾತಾ ಹಂಡಿ ಪರವಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ರಾಜ್ಯ ಸರ್ಕಾರ ಮತ್ತು ಪೊಲೀಸರ ವಿರುದ್ಧ ಕೇಸರಿ ಪಡೆ ಸಮರ ಸಾರಿದೆ.
ಮತ್ತೊಂದು ಕಡೆ ವಿಡಿಯೋ ವೈರಲ್ ಬೆನ್ನಲ್ಲೇ ಕಿಡಿಕಾರಿರುವ ಕಾಂಗ್ರೆಸ್ ನಾಯಕ ಅಲ್ತಾಫ್ ಹಳ್ಳೂರ, “ಬಿಜೆಪಿಯವರು ಒಬ್ಬ ರಾಕ್ಷಸಿಯನ್ನು ಉಳಿಸಲು ಪ್ರತಿಭಟನೆ ಮಾಡುತ್ತಿದ್ದಾರೆ. ಇಂತಹ ಕೊಳಕು ಚಾರಿತ್ರ್ಯದ ಮಹಿಳೆಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ನಾಚಿಕೆಗೇಡು” ಎಂದು ಟೀಕಿಸಿದ್ದಾರೆ.






