ಚಿಕ್ಕೋಡಿ: ರಾಜ್ಯದಲ್ಲಿ ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅತ್ಯಂತ ಮಹತ್ವಾಕಾಂಕ್ಷೆಯಿಂದ ಜಾರಿಗೆ ತಂದ ‘ಇಂದಿರಾ ಕ್ಯಾಂಟೀನ್’ ಯೋಜನೆ ಚಿಕ್ಕೋಡಿ ಪಟ್ಟಣದಲ್ಲಿ ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿ ನಿಂತಿದೆ. ಬಡವರ ಹಸಿವು ನೀಗಿಸಬೇಕಿದ್ದ ಕಟ್ಟಡಗಳು ಇದೀಗ ಉದ್ಘಾಟನೆ ಕಾಣದೆ ಧೂಳು ತಿನ್ನುತ್ತಿವೆ.
ಚಿಕ್ಕೋಡಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡು ನೂತನ ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಿಸಲಾಗಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡು, ಎಲ್ಲವೂ ಸಿದ್ಧವಾಗಿ ಬರೋಬ್ಬರಿ ಒಂದು ವರ್ಷವೇ ಕಳೆದಿದೆ. ಆದರೆ, ಈವರೆಗೂ ಈ ಕ್ಯಾಂಟೀನ್‌ಗಳಿಗೆ ಉದ್ಘಾಟನೆಯ ಭಾಗ್ಯ ಮಾತ್ರ ದೊರೆತಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ಕಟ್ಟಡಗಳು ಬಳಕೆಯಾಗದೆ ಪಾಳು ಬೀಳುವ ಹಂತ ತಲುಪಿವೆ.
ಚಿಕ್ಕೋಡಿ ಪುರಸಭೆ ಅಧಿಕಾರಿಗಳ ತೀವ್ರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಒಂದೆಡೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಎಂದು ಹೇಳಿಕೊಳ್ಳುವ ಅಧಿಕಾರಿಗಳು, ಮತ್ತೊಂದೆಡೆ ಸಿದ್ಧವಾಗಿರುವ ಕ್ಯಾಂಟೀನ್ ಆರಂಭಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಸದ್ಯ ಉದ್ಘಾಟನೆಗೊಳ್ಳದ ಈ ಕ್ಯಾಂಟೀನ್ ಆವರಣವು ಖಾಸಗಿ ವಾಹನಗಳ ಪಾರ್ಕಿಂಗ್ ತಾಣವಾಗಿ ಮಾರ್ಪಟ್ಟಿದೆ. ಎಲ್ಲಿ ನೋಡಿದರೂ ಧೂಳು, ವಾಹನಗಳ ದರ್ಬಾರ್ ಎನ್ನುವಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತ ಕಡೆ ಒಮ್ಮೆ ಕಣ್ಣಾಯಿಸಬೇಕಿದೆ. ಬಡವರ ಹೊಟ್ಟೆ ತುಂಬಿಸಬೇಕಾದ ಕ್ಯಾಂಟೀನ್‌ಗಳು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ “ಇದ್ದೂ ಇಲ್ಲದಂತಾಗಿವೆ”. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಧೂಳು ಹಿಡಿಯುತ್ತಿರುವ ಕ್ಯಾಂಟೀನ್‌ಗಳನ್ನು ಸ್ವಚ್ಛಗೊಳಿಸಿ, ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.






