ಬೆಂಗಳೂರು: ಸೈಬರ್ ವಂಚಕರು ಈಗ ಜನಸಾಮಾನ್ಯರನ್ನು ಬಿಟ್ಟು ನೇರವಾಗಿ ಪೊಲೀಸ್ ಅಧಿಕಾರಿಗಳ ಹೆಸರನ್ನೇ ಬಳಸಿಕೊಂಡು ವಂಚನೆಗೆ ಇಳಿದಿದ್ದಾರೆ. ಐಪಿಎಸ್ ಅಧಿಕಾರಿಯೊಬ್ಬರ ಫೋಟೋ ಮತ್ತು ಹೆಸರನ್ನು ದುರ್ಬಳಕೆ ಮಾಡಿಕೊಂಡು, ವಾಟ್ಸಾಪ್ (WhatsApp) ಮೂಲಕ ಹಣ ಪೀಕಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಖುದ್ದು ಡಿಸಿಪಿ ಅಕ್ಷಯ್ ಅವರ ಹೆಸರಿನಲ್ಲಿ ನಕಲಿ ವಾಟ್ಸಾಪ್ ಖಾತೆ ತೆರೆದಿರುವ ಕಿಡಿಗೇಡಿಗಳು, ಅವರ ಪ್ರೊಫೈಲ್ ಫೋಟೋ ಬಳಸಿಕೊಂಡು ಅಧಿಕಾರಿಯ ಸೋಗಿನಲ್ಲಿ ಸಂದೇಶ ಕಳುಹಿಸಿದ್ದಾರೆ. ಡಿಸಿಪಿ ಅವರ ಆಪ್ತ ವಲಯದಲ್ಲಿರುವ 3 ರಿಂದ 4 ಜನ ಸ್ನೇಹಿತರಿಗೆ ಮೆಸೇಜ್ ಮಾಡಿರುವ ವಂಚಕರು, ತುರ್ತಾಗಿ ಹಣ ಬೇಕಿದೆ ಎಂದು ಕೇಳುವ ಮೂಲಕ ವಂಚಿಸಲು ಸಂಚು ರೂಪಿಸಿದ್ದಾರೆ.
ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಡಿಸಿಪಿ ಅಕ್ಷಯ್ ಅವರು, ಸಾರ್ವಜನಿಕರಿಗೆ ಮತ್ತು ತಮ್ಮ ಸ್ನೇಹಿತರಿಗೆ ಮನವಿ ಮಾಡಿದ್ದಾರೆ. “ನನ್ನ ಹೆಸರಿನಲ್ಲಿ ಅಥವಾ ಫೋಟೋ ಬಳಸಿ ಬರುವ ಯಾವುದೇ ಸಂದೇಶಗಳಿಗೆ ದಯವಿಟ್ಟು ಪ್ರತಿಕ್ರಿಯಿಸಬೇಡಿ (Response) ಮತ್ತು ಯಾರಿಗೂ ಹಣ ವರ್ಗಾವಣೆ ಮಾಡಬೇಡಿ” ಎಂದು ಸ್ಪಷ್ಟಪಡಿಸಿದ್ದಾರೆ. ಸೈಬರ್ ವಂಚಕರ ಬಗ್ಗೆ ಎಚ್ಚರದಿಂದಿರಲು ಅವರು ಸೂಚಿಸಿದ್ದಾರೆ.






