ನವದೆಹಲಿ: ಸೈಬರ್ ಲೋಕದ ಖದೀಮರು ವಂಚನೆಗೆ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದು, ಇದೀಗ ‘ಡಿಜಿಟಲ್ ಅರೆಸ್ಟ್’ (Digital Arrest) ಹೆಸರಲ್ಲಿ 80 ವರ್ಷದ ವೃದ್ಧರೊಬ್ಬರಿಗೆ ಬರೋಬ್ಬರಿ 1 ಕೋಟಿ ರೂಪಾಯಿ ವಂಚಿಸಿದ ಆಘಾತಕಾರಿ ಘಟನೆ ರಾಜಧಾನಿಯಲ್ಲಿ ನಡೆದಿದೆ. ಈ ಪ್ರಕರಣವನ್ನು ಭೇದಿಸಿರುವ ದೆಹಲಿ ಪೊಲೀಸರ IFSO (Intelligence Fusion and Strategic Operations) ಘಟಕವು, ಇಬ್ಬರು ಖಾಸಗಿ ಬ್ಯಾಂಕ್ ಉದ್ಯೋಗಿಗಳು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳು ತನಿಖಾ ಸಂಸ್ಥೆ ಮತ್ತು ಟೆಲಿಕಾಂ ಇಲಾಖೆಯ ಅಧಿಕಾರಿಗಳ ಸೋಗಿನಲ್ಲಿ ವಾಟ್ಸಾಪ್ ಮೂಲಕ ವೃದ್ಧರನ್ನು ಸಂಪರ್ಕಿಸಿದ್ದರು. ಅವರ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಅಕ್ರಮ ಚಟುವಟಿಕೆಗಳಿಗೆ ಲಿಂಕ್ ಆಗಿದೆ ಎಂದು ಸುಳ್ಳು ಹೇಳಿ ಬೆದರಿಸಿದ್ದಾರೆ. ಈ ನೆಪದಲ್ಲಿ ವೃದ್ಧ ದಂಪತಿಯನ್ನು ಮನೆಯಲ್ಲಿಯೇ ಬರೋಬ್ಬರಿ 7 ದಿನಗಳ ಕಾಲ ‘ಡಿಜಿಟಲ್ ಅರೆಸ್ಟ್’ನಲ್ಲಿ ಇರಿಸಿದ್ದರು.
ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಹಣವನ್ನು ಹಿಂದಿರುಗಿಸುವುದಾಗಿ ನಂಬಿಸಿದ ವಂಚಕರು, ವೃದ್ಧರ ಬಳಿ ಇದ್ದ ಸ್ಥಿರ ಠೇವಣಿಗಳನ್ನು (Fixed Deposits) ಮುರಿಯುವಂತೆ ಮಾಡಿದ್ದಾರೆ. ಬ್ಯಾಂಕ್ ಉಳಿತಾಯದ ಹಣವನ್ನೆಲ್ಲಾ ವರ್ಗಾಯಿಸಿಕೊಂಡಿದ್ದಲ್ಲದೆ, ಚಿನ್ನದ ಮೇಲೆ ಸಾಲ ಪಡೆಯುವಂತೆಯೂ ಒತ್ತಾಯಿಸಿ ಒಟ್ಟು 96 ಲಕ್ಷ ರೂ. ವಂಚಿಸಿದ್ದಾರೆ. ಕಳೆದ ವರ್ಷ ನವೆಂಬರ್ 4 ರಂದು ಈ ಸಂಬಂಧ ಇ-ಎಫ್‌ಐಆರ್ ದಾಖಲಾಗಿತ್ತು.
ಬ್ಯಾಂಕ್ ನೌಕರರೇ ಸಾಥ್! ತನಿಖೆಯ ವೇಳೆ ಹರ್ಯಾಣದ ಹಿಸಾರ್ ಮೂಲದ ಪ್ರದೀಪ್ ಕುಮಾರ್ ಮತ್ತು ನಮನ್‌ದೀಪ್ ಮಲಿಕ್ ಎಂಬುವವರನ್ನು ಮೊದಲು ಪತ್ತೆಹಚ್ಚಲಾಯಿತು. ಬಳಿಕ ಒಡಿಶಾದ ಭುವನೇಶ್ವರದಿಂದ ಶಶಿಕಾಂತ್ ಪಟ್ನಾಯಕ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ನಕಲಿ ಜಿಎಸ್‌ಟಿ ನೋಂದಣಿ ಮತ್ತು ಹಣ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದನು.
ಅತ್ಯಂತ ಆಘಾತಕಾರಿ ವಿಷಯವೆಂದರೆ, ಪಶ್ಚಿಮ ದೆಹಲಿಯ ಖಾಸಗಿ ಬ್ಯಾಂಕ್ ಒಂದರ ಹಿರಿಯ ಸೇಲ್ಸ್ ಮ್ಯಾನೇಜರ್ ನೀಲೇಶ್ ಕುಮಾರ್ ಮತ್ತು ಸೇಲ್ಸ್ ಆಫೀಸರ್ ಚಂದನ್ ಕುಮಾರ್ ಕೂಡ ಈ ದಂಧೆಯಲ್ಲಿ ಶಾಮೀಲಾಗಿದ್ದರು. ನಕಲಿ ದಾಖಲೆಗಳನ್ನು ಬಳಸಿ ಕರೆಂಟ್ ಅಕೌಂಟ್ ತೆರೆಯಲು ಮತ್ತು ಹಣವನ್ನು ಬೇರೆಡೆಗೆ ವರ್ಗಾಯಿಸಲು ಇವರು ಗ್ಯಾಂಗ್‌ಗೆ ಸಹಾಯ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.






