ಬೆಂಗಳೂರು: ರಾಜ್ಯ ಸರ್ಕಾರದ (Karnataka government) ಗ್ಯಾರಂಟಿ ಯೋಜನೆಗಳ ಅಬ್ಬರದ ನಡುವೆ ಹಲವು ಅಭಿವೃದ್ಧಿ ಕಾಮಗಾರಿಗಳು ಮತ್ತು ಇಲಾಖೆಗಳ ವೇತನಕ್ಕೆ ಅನುದಾನದ ಕೊರತೆ ಎದುರಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇದರ ನೇರ ಪರಿಣಾಮ ಈಗ ಕಾರಾಗೃಹಗಳಲ್ಲಿರುವ ಕೈದಿಗಳ ಮೇಲೂ ಬೀರಿದ್ದು, ಅವರ ಬೆವರಿನ ಸಂಭಾವನೆಗೆ ಸರ್ಕಾರ ಕತ್ತರಿ ಹಾಕಿದಂತಿದೆ.
ಜೈಲುಗಳಲ್ಲಿ ವಿವಿಧ ಕೆಲಸಗಳಲ್ಲಿ ತೊಡಗಿರುವ ಕೈದಿಗಳಿಗೆ ಕಳೆದ 10 ತಿಂಗಳಿಂದ ಸರ್ಕಾರ ಕೂಲಿ ಹಣವನ್ನು ಪಾವತಿಸಿಲ್ಲ. ಇದರಿಂದಾಗಿ ಜೈಲಿನಲ್ಲಿರುವ ಬಡ ಕೈದಿಗಳು ದೈನಂದಿನ ಅವಶ್ಯಕತೆಗಳಿಗೂ ಪರದಾಡುವಂತಾಗಿದೆ.
ಮೂಲಗಳ ಪ್ರಕಾರ, ಕಳೆದ 10 ತಿಂಗಳ ಅವಧಿಯಲ್ಲಿ ಕೈದಿಗಳಿಗೆ ನೀಡಬೇಕಾದ ಒಟ್ಟು ಕೂಲಿ ಮೊತ್ತ ಬರೋಬ್ಬರಿ 16 ಕೋಟಿ (16 Crore) ರೂಪಾಯಿಗಳಾಗಿದೆ. ಈ ಹಣವನ್ನು ಬಿಡುಗಡೆ ಮಾಡುವಂತೆ ಬಂಧೀಖಾನೆ ಇಲಾಖೆಯು ಸರ್ಕಾರಕ್ಕೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜೈಲಿನಲ್ಲಿದ್ದು ಕೆಲಸ ಮಾಡುವ ಅನೇಕ ಕೈದಿಗಳು ತಾವು ಗಳಿಸಿದ ಹಣವನ್ನು ತಮ್ಮ ಕುಟುಂಬದ ನಿರ್ವಹಣೆಗೆ ಕಳುಹಿಸುತ್ತಿದ್ದರು. ಈಗ ಹಣ ಬಿಡುಗಡೆಯಾಗದ ಕಾರಣ ಅವರ ಕುಟುಂಬಗಳೂ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.
ಯೋಜನೆಗಳು ಹಳ್ಳ ಹಿಡಿದಿವೆಯೇ?
ಗ್ಯಾರಂಟಿ ಯೋಜನೆಗಳಿಗೆ (Guarantee Schemes) ಹಣ ಹೊಂದಿಸಲು ಸರ್ಕಾರವು ಇತರೆ ಇಲಾಖೆಗಳ ಅನುದಾನಕ್ಕೆ ಕನ್ನ ಹಾಕುತ್ತಿದೆ ಎನ್ನುವ ವಿಪಕ್ಷಗಳ ಟೀಕೆಗೆ ಈ ಘಟನೆ ಪುಷ್ಟಿ ನೀಡುವಂತಿದೆ. ಜೈಲುಗಳಂತಹ ಮೂಲಭೂತ ಇಲಾಖೆಗಳಿಗೂ ಹಣ ನೀಡಲು ಸರ್ಕಾರದ ಬಳಿ ಬೊಕ್ಕಸ ಖಾಲಿಯಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.






