ಬೆಂಗಳೂರು: ಗಡಿ ಭಾಗದ ಕನ್ನಡಿಗರ ಪಾಲಿಗೆ ಕೇರಳ ಸರ್ಕಾರವು ಭಾಷಾ ಸಂಕಷ್ಟ ತಂದೊಡ್ಡಿದೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ (Malayalam) ಭಾಷೆಯನ್ನು ಕಡ್ಡಾಯಗೊಳಿಸುವ ಕಾನೂನು ತರಲು ಮುಂದಾಗಿರುವ ಕೇರಳದ ನಿರ್ಧಾರವು ಈಗ ಎರಡು ರಾಜ್ಯಗಳ ನಡುವಿನ ಭಾಷಾ ಸಮರಕ್ಕೆ ಕಾರಣವಾಗಿದೆ.
ಪ್ರಕರಣದ ಹಿನ್ನೆಲೆ:
ಕೇರಳ ಸರ್ಕಾರವು ತನ್ನ ರಾಜ್ಯದ ಭಾಷಾ ಸಂವಿಧಾನ ಖಾತರಿಗಾಗಿ ಎಲ್ಲಾ ಮಾಧ್ಯಮದ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ ಎಂದು ಕಾನೂನು ರೂಪಿಸುತ್ತಿದೆ. ಇದರಿಂದ ಕಾಸರಗೋಡು ಭಾಗದ ಕನ್ನಡ ಶಾಲೆಗಳ ಮೇಲೂ ಮಲಯಾಳಂ ಹೇರಿಕೆಯಾಗಲಿದೆ. ಈ ಕಾನೂನಿನಿಂದಾಗಿ ಕಾಸರಗೋಡಿನಲ್ಲಿರುವ ಸಾವಿರಾರು ಕನ್ನಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದ್ದು, ಕನ್ನಡ ಸಂಸ್ಕೃತಿ ಮತ್ತು ಶಿಕ್ಷಣದ ಮೇಲೆ ಪ್ರಹಾರ ನಡೆದಂತಾಗುತ್ತದೆ ಎಂಬ ಆತಂಕ ಮೂಡಿದೆ.
ರಾಜಕೀಯ ಪ್ರತಿರೋಧ:
ಕೇರಳದ ಈ ನಿರ್ಧಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೆರೆಯ ರಾಜ್ಯಗಳ ಕನ್ನಡಿಗರ ಹಿತರಕ್ಷಣೆ ನಮ್ಮ ಜವಾಬ್ದಾರಿ ಎಂದು ಹೇಳಿರುವ ಅವರು, ಪಿಣರಾಯಿ ವಿಜಯನ್ (CM Pinarayi Vijayan) ಅವರಿಗೆ ಮಸೂದೆ ಕೈಬಿಡುವಂತೆ ಒತ್ತಡ ಹೇರಿದ್ದಾರೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ (KBADA) ಕಾರ್ಯದರ್ಶಿ ಪ್ರಕಾಶ್ ವಿ. ಮಟ್ಟಿಹಳ್ಳಿ ಅವರು ಕೇರಳ ರಾಜ್ಯಪಾಲರನ್ನು ಭೇಟಿ ಮಾಡಿ, ಈ ಭಾಷಾ ಮಸೂದೆಯನ್ನು ತಡೆಹಿಡಿಯುವಂತೆ ಮನವಿ ಸಲ್ಲಿಸಿದ್ದಾರೆ. ಮನವಿಯನ್ನು ಪರಿಶೀಲಿಸುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ.






